ರೈತರನ್ನು ಅಪರಾಧಿಗಳಂತೆ ನಡೆಸಿಕೊಳ್ಳಬಾರದು, ಅನ್ನದಾತರೊಂದಿಗೆ ಮಾತನಾಡಬೇಕು : ಮಧುರಾ ಸ್ವಾಮಿನಾಥನ್

Update: 2024-02-14 15:49 GMT

ಮಧುರಾ ಸ್ವಾಮಿನಾಥನ್ 

ಹೊಸದಿಲ್ಲಿ : ಭಾರತದ ರೈತರನ್ನು ಅಪರಾಧಿಗಳಂತೆ ನಡೆಸಿಕೊಳ್ಳಬಾರದು ಎಂದು ಭಾರತದ ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್. ಸ್ವಾಮಿನಾಥನ್ ಅವರ ಪುತ್ರಿ, ಅಭಿವೃದ್ಧಿಶೀಲ ಅರ್ಥಶಾಸ್ತ್ರಜ್ಞೆ ಮಧುರಾ ಸ್ವಾಮಿನಾಥನ್ ಮಂಗಳವಾರ ಹೇಳಿದ್ದಾರೆ.

ರೈತರ ಪ್ರತಿಭಟನೆಯನ್ನು ಹರ್ಯಾಣ ಸರಕಾರ ನಿರ್ವಹಿಸುತ್ತಿರುವ ರೀತಿಯನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ.

ತಮ್ಮ ತಂದೆಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಘೋಷಿಸಿರುವ ಹಿನ್ನೆಲೆಯಲ್ಲಿ ಪುಸಾದ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

‘‘ಪಂಜಾಬಿನ ರೈತರು ಇಂದು ದಿಲ್ಲಿಯತ್ತ ರ್ಯಾಲಿ ನಡೆಸುತ್ತಿದ್ದಾರೆ. ದಿನಪತ್ರಿಕೆಯ ವರದಿಯ ಪ್ರಕಾರ ಹರ್ಯಾಣದಲ್ಲಿ ಅವರಿಗಾಗಿ ಜೈಲುಗಳನ್ನು ಸಿದ್ಧಪಡಿಸಲಾಗುತ್ತಿದೆ, ಬ್ಯಾರಿಕೇಡ್ ಗಳನ್ನು ಅಳವಡಿಸಲಾಗುತ್ತಿದೆ, ಅವರನ್ನು ತಡೆಯಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ನಾನು ಭಾವಿಸುತ್ತೇನೆ. ಆದರೆ, ಅವರು ರೈತರು. ಅವರು ಅಪರಾಧಿಗಳಲ್ಲ’’ ಎಂದು ಕಾರ್ಯಕ್ರಮದ ವರ್ಚುವಲ್ (ವೀಡಿಯೊ ಕಾನ್ಫರೆನ್ಸ್)ನಲ್ಲಿ ಮಾತನಾಡಿದ ಅವರು ಹೇಳಿದರು.

‘‘ಭಾರತದ ಪ್ರಮುಖ ವಿಜ್ಞಾನಿಗಳಾದ ನಿಮ್ಮೆಲ್ಲರಲ್ಲಿ ನಾನು ವಿನಂತಿಸುತ್ತೇನೆ. ನಾವು ನಮ್ಮ ಅನ್ನದಾತರೊಂದಿಗೆ ಮಾತನಾಡಬೇಕು. ನಾವು ಅವರನ್ನು ಅಪರಾಧಿಗಳಂತೆ ನಡೆಸಿಕೊಳ್ಳಬಾರದು. ನಾವು ಪರಿಹಾರ ಕಂಡುಕೊಳ್ಳಬೇಕು. ಇದು ನನ್ನ ವಿನಂತಿ’’ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಮಂಗಳವಾರ ಹಾಕಿರುವ ಪೋಸ್ಟ್‌ ನಲ್ಲಿ ಮಧುರಾ ಸ್ವಾಮಿನಾಥನ್, ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರಕಾರ ಹಿಂಪಡೆದುಕೊಂಡಿರುವ ಕುರಿತು ಎಂ.ಎಸ್. ಸ್ವಾಮಿನಾಥನ್ ಅವರು ಸಂತಸ ವ್ಯಕ್ತವಡಿಸಿ 2021 ನವೆಂಬರ್ ನಲ್ಲಿ ನೀಡಿರುವ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News