ಹುಡುಗಿಯರಿಗೆ ಕೀಟಲೆ ಮಾಡಿ, ಅಶ್ಲೀಯ ವಿಡಿಯೊ ವೀಕ್ಷಿಸುತ್ತಿದ್ದ ಮಗನನ್ನು ಕೊಂದ ತಂದೆ!

Update: 2024-02-02 03:52 GMT

ಆರೋಪಿ ತಂದೆ ವಿಜಯ ಬಟ್ಟು 

ಹೊಸದಿಲ್ಲಿ: ತನ್ನ ಫೋನ್ನಲ್ಲಿ ಅಶ್ಲೀಲ ವಿಡಿಯೊಗಳನ್ನು ನೋಡುತ್ತಿದ್ದ ಹಾಗೂ ಶಾಲೆಯಲ್ಲಿ ಹುಡುಗಿಯರನ್ನು ಚುಡಾಯಿಸುತ್ತಿದ್ದ ಮಗನ ವರ್ತನೆಯಿಂದ ಬೇಸತ್ತ ತಂದೆ, ಮಗನಿಗೆ ಪಾನೀಯದಲ್ಲಿ ವಿಷಬೆರೆಸಿ ನೀಡಿ ಕೊಂದ ಪ್ರಕರಣ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ತಿಂಗಳ 13ರಂದು ಒಬ್ಬ ಯುವಕ ನಾಪತ್ತೆಯಾದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಇದಾದ ಸ್ವಲ್ಪ ಸಮಯದಲ್ಲೇ ಯುವಕನ ಮೃತದೇಹ ಪತ್ತೆಯಾದ ಬಗ್ಗೆ ಮಾಹಿತಿ ಸಿಕ್ಕಿತು. ಈ ಮೃತದೇಹ ನಾಪತ್ತೆಯಾಗಿದ್ದ ವಿಶಾಲ್ ನದ್ದು ಎನ್ನುವುದನ್ನು ಕುಟುಂಬ ದೃಢಪಡಿಸಿತ್ತು. ಅಟಾಪ್ಸಿ ಪರೀಕ್ಷೆಯಿಂದ ಈ ಸಾವು ವಿಷಪ್ರಾಶನದಿಂದ ಸಂಭವಿಸಿದೆ ಎನ್ನುವುದು ತಿಳಿದು ಬಂತು.

ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕುಟುಂಬದವರನ್ನು ವಿಚಾರಣೆಗೆ ಗುರಿಪಡಿಸಿದರು. ಅವರ ಹೇಳಿಕೆಯಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ. ಕೊನೆಗೆ ಪೊಲೀಸರು ತಂದೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಚಾರಿಸಿದಾಗ, ತಮ್ಮ ದುಃಖವನ್ನು ಹಂಚಿಕೊಂಡ ತಂದೆ ತಪ್ಪೊಪ್ಪಿಕೊಂಡಿದ್ದಾಗಿ ಪೊಲೀಸರು ಹೇಳಿದ್ದಾರೆ.

"ಮಗ ಚೆನ್ನಾಗಿ ಓದುತ್ತಿರಲಿಲ್ಲ. ಶಾಲೆಯಲ್ಲಿ ಹುಡುಗಿಯರನ್ನು ಕೀಟಲೆ ಮಾಡುತ್ತಿದ್ದ ಹಾಗೂ ಫೋನ್ ನಲ್ಲಿ ಅಶ್ಲೀಲ ವಿಡಿಯೊ ನೋಡಿತ್ತಿದ್ದ. ಮುಂದಿನ ದಾರಿ ನೋಡಿಕೊಳ್ಳುವಂತೆ ಮಗನಿಗೆ ಹೇಳಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಶಾಲೆಯಿಂದಲೂ ದೂರುಗಳು ಬರುತ್ತಿದ್ದವು. ಇದರಿಂದ ಹತಾಶೆ ಹೊಂದಿ ಮಗನನ್ನು ಸಾಯಿಸಿದ್ದಾಗಿ ತಂದೆ ಹೇಳಿದ್ದಾರೆ" ಎಂದು ಪೊಲೀಸರು ವಿವರಿಸಿದ್ದಾರೆ.

ಮಗನ ವರ್ತನೆಯಿಂದ ಬೇಸತ್ತ ತಂದೆ ಜನವರಿ 13ರಂದು ದ್ವಿಚಕ್ರವಾಹನದಲ್ಲಿ ತುಳಜಾಪುರ ರಸ್ತೆಗೆ ಕರೆದೊಯ್ದು ತಂಪು ಪಾನೀಯಕ್ಕೆ ವಿಷಬೆರೆಸಿ ಮಗನಿಗೆ ನೀಡಿದ್ದಾರೆ. ತಕ್ಷಣ ಪ್ರಜ್ಞೆ ಕಳೆದುಕೊಂಡ ವಿಶಾಲ್ ನನ್ನು ಅಲ್ಲೇಬಿಟ್ಟು ತಂದೆ ಮನೆಗೆ ಬಂದಿದ್ದರು. ಆರೋಪಿ ತಂದೆ ವಿಜಯ ಬಟ್ಟು ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News