ಬರ ನಿರ್ವಹಣೆಗೆ ಕೇಂದ್ರದಿಂದ ಆರ್ಥಿಕ ನೆರವು | ಜುಲೈಯಲ್ಲಿ ಸುಪ್ರೀಂನಲ್ಲಿ ಕರ್ನಾಟಕದ ಅರ್ಜಿ ವಿಚಾರಣೆ

Update: 2024-05-06 16:30 GMT

ಸುಪ್ರೀಂ ಕೋರ್ಟ್ | PC : PTI 

ಹೊಸದಿಲ್ಲಿ : ಬರ ನಿರ್ವಹಣೆಗಾಗಿ ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ (ಎನ್‌ಡಿಆರ್‌ಎಫ್)ಯಿಂದ ರಾಜ್ಯಕ್ಕೆ ಹಣಕಾಸು ನೆರವು ಬಿಡುಗಡೆ ಮಾಡಲು ಕೇಂದ್ರ ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಕರ್ನಾಟಕ ಸರಕಾರ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಜುಲೈಯಲ್ಲಿ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ತಿಳಿಸಿದೆ.

ಬರ ನಿರ್ವಹಣೆಗಾಗಿ ಕರ್ನಾಟಕ ಸರಕಾರಕ್ಕೆ ಸುಮಾರು 3,400 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರಕಾರ ಎಪ್ರಿಲ್ 29ರಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಹಾಗೂ ಸಂದೀಪ್ ಮೆಹ್ತಾ ಅವರ ಪೀಠದ ಮುಂದೆ ಈ ಪ್ರಕರಣ ಸೋಮವಾರ ವಿಚಾರಣೆಗೆ ಬಂತು. ಕರ್ನಾಟಕ ಸರಕಾರದ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಈ ವಿಷಯದ ಕುರಿತಂತೆ ರಾಜ್ಯ ಸರಕಾರ ಅಫಿಡಾವಿಟ್ ಸಲ್ಲಿಸಲಿದೆ ಎಂದು ಹೇಳಿದರು. ಪೀಠ ವಿಚಾರಣೆಯನ್ನು ಜುಲೈಗೆ ಮುಂದೂಡಿತು.

ಕಳೆದ ವಾರ ವಿಚಾರಣೆ ಸಂದರ್ಭ ಕಪಿಲ್ ಸಿಬಲ್, 3,450 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದರೆ, 18,000 ಕೋಟಿ ರೂ. ನೆರವು ನೀಡುವಂತೆ ರಾಜ್ಯ ಸರಕಾರ ಮನವಿ ಮಾಡಿತ್ತು ಎಂದು ಪೀಠಕ್ಕೆ ತಿಳಿಸಿದ್ದರು.

ಎನ್‌ಡಿಆರ್‌ಎಫ್ ಪ್ರಕಾರ ಬರ ನಿರ್ವಹಣೆಗೆ ಹಣಕಾಸು ನೆರವು ಬಿಡುಗಡೆ ಮಾಡದ ಕೇಂದ್ರ ಸರಕಾರದ ಕ್ರಮವನ್ನು ಸಂವಿಧಾನದ 14 ಮತ್ತು 21ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಿದ ರಾಜ್ಯದ ಜನರ ಮೂಲಭೂತ ಹಕ್ಕುಗಳ ‘ಪೂರ್ವಭಾವಿ ಉಲ್ಲಂಘನೆ’ ಎಂದು ಘೋಷಿಸುವಂತೆ ಅರ್ಜಿ ಕೋರಿತ್ತು.

ರಾಜ್ಯ ತೀವ್ರ ಬರದಿಂದ ತತ್ತರಿಸುತ್ತಿದ್ದು, ಜನ ಜೀವನದ ಮೇಲೆ ಪರಿಣಾಮ ಬೀರಿದೆ. ಅಲ್ಲದೆ ಜೂನ್‌ನಲ್ಲಿ ಆರಂಭವಾಗಿ ಸೆಪ್ಟಂಬರ್‌ನಲ್ಲಿ ಅಂತ್ಯಗೊಳ್ಳುವ ಖಾರೀಫ್ 2023 ಋತುವಿನಲ್ಲಿ ಒಟ್ಟು 236 ತಾಲೂಕುಗಳ ಪೈಕಿ 223ನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ ಎಂದು ಅರ್ಜಿ ಹೇಳಿದೆ.

ಇವುಗಳಲ್ಲಿ 196 ತಾಲೂಕುಗಳನ್ನು ತೀವ್ರ ಬರ ಪೀಡಿತ ಹಾಗೂ ಉಳಿದ 27 ತಾಲೂಕುಗಳನ್ನು ಮಧ್ಯಮ ಬರ ಪೀಡಿತ ಎಂದು ವರ್ಗೀಕರಿಸಲಾಗಿದೆ ಎಂದು ಅರ್ಜಿ ತಿಳಿಸಿದೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News