ಅಗ್ನಿ ಅವಘಡ: ಒಂದೇ ಕುಟುಂಬದ ಏಳು ಮಂದಿ ಮೃತ್ಯು

Update: 2024-04-03 09:52 GMT

ಸಾಂದರ್ಭಿಕ ಚಿತ್ರ

ಛತ್ರಪತಿ ಸಂಭಾಜಿನಗರ: ಅಗ್ನಿ ಅವಘಡದಲ್ಲಿ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟಿರುವ ಘಟನೆ ಔರಂಗಾಬಾದ್ ದಂಡು ಪ್ರದೇಶದ ದಾನಾ ಬಝಾರ್ ನಲ್ಲಿ ನಡೆದಿದೆ. ಬೆಂಕಿ ಅವಘಡ ಸಂಭವಿಸಿದ ಅಂಗಡಿಯಲ್ಲಿ ನಿದ್ರಿಸುತ್ತಿದ್ದ ವ್ಯಕ್ತಿಯೋರ್ವನ ಪತ್ತೆಗೆ ಶೋಧ ಕಾರ್ಯ ಪ್ರಗತಿಯಲ್ಲಿದೆ.

ಮೃತರನ್ನು ಹಮೀದಾ ಬೇಗಂ (49), ಆಕೆಯ ಇಬ್ಬರು ಪುತ್ರರಾದ ವಾಸೀಂ (29), ಸೊಹೇಲ್ (27), ಅವರಿಬ್ಬರ ಪತ್ನಿಯರಾದ ತನ್ವೀರ್ (25) ಹಾಗೂ ರೇಷ್ಮಾ (23) ಹಾಗೂ ಅವರ ಐದು ವರ್ಷ ವಯಸ್ಸಿನ ಇಬ್ಬರು ಮಕ್ಕಳು ಎಂದು ಗುರುತಿಸಲಾಗಿದೆ.

ಪ್ರಾಥಮಿಕ ವರದಿಗಳ ಪ್ರಕಾರ, ಬುಧವಾರ ಬೆಳಗ್ಗೆ ಸುಮಾರು 3 ಗಂಟೆಯ ವೇಳೆ ಎಲೆಕ್ಟ್ರಿಕ್ ಬೈಕ್ ಅನ್ನು ಚಾರ್ಜ್ ಮಾಡಲು ಮುಂದಾದಾಗ ಬೆಂಕಿ ಕಾಣಿಸಿಕೊಂಡಿದ್ದು, ಈ ಬೆಂಕಿಯು ಟೈಲರ್ ಅಂಗಡಿಯೊಂದಕ್ಕೆ ಹಬ್ಬಿ, ನಂತರ ಅಂಗಡಿಯ ಮೇಲಿದ್ದ ಎರಡು ಅಂತಸ್ತಿನ ಮನೆಗೆ ಹರಡಿಕೊಂಡಿದೆ.

ಸುದ್ದಿ ತಿಳಿಯುತ್ತಿದ್ದಂತೆಯೆ ಉಪ ಪೊಲೀಸ್ ಆಯುಕ್ತ (ವಲಯ-1) ನಿತಿನ್ ಬಾಗಟೆ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು.

ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಧಾವಿಸುವ ಮುನ್ನವೇ ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದರು. ಹೀಗಿದ್ದೂ ಬೆಂಕಿ ಅವಘಡಕ್ಕೆ ಸಿಲುಕಿದ ಕುಟುಂಬದ ಕೆಲವು ಸದಸ್ಯರು ಮೃತಪಟ್ಟಿದ್ದರು ಎಂದು ಹೇಳಲಾಗಿದೆ.

ಮೃತದೇಹಗಳನ್ನು ಸರಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News