ಛತ್ತೀಸ್ ಗಢ | ಬಸ್ತಾರ್ ಪ್ರಾಂತ್ಯದ 13 ನಕ್ಸಲ್ ಪೀಡಿತ ಗ್ರಾಮಗಳಲ್ಲಿ ಪ್ರಪ್ರಥಮ ಬಾರಿಗೆ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ

Update: 2024-08-14 13:45 GMT

ಸಾಂದರ್ಭಿಕ ಚಿತ್ರ

ರಾಯ್ಪುರ್: ಛತ್ತೀಸ್ ಗಢದ ನಕ್ಸಲ್ ಪೀಡಿತ ಬಸ್ತಾರ್ ಪ್ರಾಂತ್ಯದ 13 ಕುಗ್ರಾಮಗಳಲ್ಲಿ ಗುರುವಾರ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯಂದು ಇದೇ ಪ್ರಪ್ರಥಮ ಬಾರಿಗೆ ರಾಷ್ಟ್ರ ಧ್ವಜಾರೋಹಣ ನೆರವೇರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಗ್ರಾಮಗಳಲ್ಲಿ ಕಳೆದ ಏಳು ತಿಂಗಳಿನಿಂದ ಭದ್ರತಾ ಪಡೆಗಳ ಶಿಬಿರಗಳನ್ನು ನಿಯೋಜಿಸಿರುವುದರಿಂದ, ಸಂಬಂಧಿತ ಪ್ರದೇಶಗಳ ಅಭಿವೃದ್ಧಿಗೆ ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಸ್ತಾರ್ ವಲಯದ ಪೊಲೀಸ್ ಮಹಾ ನಿರೀಕ್ಷಕ ಸುಂದರ್ ರಾಜ್ ಪಿ, ತ್ರಿವರ್ಣ ಧ್ವಜವನ್ನು ದಾಂತೇವಾಡ್ ಜಿಲ್ಲೆಯ ನೇರ್ಲಿಘಾಟ್, ಕಾಂಕೇರ್ ಜಿಲ್ಲೆಯ ಪನಿದೊಬಿರ್, ಬಿಜಾಪುರ್ ಜಿಲ್ಲೆಯ ಪುತ್ಕೆಲ್ ಹಾಗೂ ಛುತ್ವಾಹಿ, ನಾರಾಯಣಪುರ್ ಜಿಲ್ಲೆಯ ಕಸ್ತೂರ್ ಮೇಟ, ಮಾಸ್ಪುರ್, ಇರಾಕ್ ಭಟ್ಟಿ ಹಾಗೂ ಮೊಹಂದಿ, ಸುಕ್ಮಾ ಜಿಲ್ಲೆಯ ಟೇಕಲ್ ಗುಡೆಮ್, ಪುವರ್ತಿ, ಲಖ್ಪಾಲ್ ಹಾಗೂ ಪುಲನ್ಪಡ್ ಗ್ರಾಮಗಳಲ್ಲಿ ಗುರುವಾರ ಧ್ವಜಾರೋಹಣ ನಡೆಸಲಾಗುತ್ತಿದ್ದು, ಈ ಗ್ರಾಮಗಳಲ್ಲಿ ಈ ಹಿಂದೆಂದೂ ಧ್ವಜಾರೋಹಣ ನಡೆದಿರಲಿಲ್ಲ ಎಂದು ತಿಳಿಸಿದ್ದಾರೆ.

ಕಳೆದ ವರ್ಷದ ಗಣರಾಜ್ಯೋತ್ಸವದ ನಂತರ, ಈ ಪ್ರದೇಶಗಳಲ್ಲಿ ಭದ್ರತಾ ಶಿಬಿರಗಳನ್ನು ನಿರ್ಮಿಸಲಾಗಿದೆ. ನೂತನವಾಗಿ ನಿರ್ಮಿಸಲಾಗಿರುವ ಈ ಶಿಬಿರಗಳು ಈ ಪ್ರಾಂತ್ಯ ಹಾಗೂ ಸ್ಥಳೀಯ ಜನರಿಗೆ ಹೊಸ ಗುರುತನ್ನು ಒದಗಿಸಿವೆ. ಯುವಕರು ಹಾಗೂ ಹಿರಿಯರ ಪಾಲಿಗೆ ಬಸ್ತಾರ್ ಪ್ರಾಂತ್ಯವನ್ನು ಶಾಂತಿ ಮತ್ತು ಸಮೃದ್ಧವಾಗಿ ನಿರ್ಮಿಸಲು ಈ ಭದ್ರತಾ ಶಿಬಿರಗಳು ಹೊಸ ಆಶಾಕಿರಣದಂತೆ ಕಾಣಿಸುತ್ತಿವೆ ಎಂದೂ ಅವರು ಹೇಳಿದ್ದಾರೆ.

ಗುರುವಾರದಂದು ಸ್ವಾತಂತ್ರ್ಯ ದಿನಾಚರಣೆ ನಡೆಯುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ, ನಿರ್ದಿಷ್ಟವಾಗಿ ಮಾವೋಪೀಡಿತ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News