ಸುಪ್ರೀಂ ಕೋರ್ಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಮೂಕ ನ್ಯಾಯವಾದಿ ವಾದ ಮಂಡನೆ

Update: 2023-09-26 16:12 GMT

ಸುಪ್ರೀಂ ಕೋರ್ಟ್ | Photo: PTI 

ಹೊಸದಿಲ್ಲಿ: ದೇಶದ ಚರಿತ್ರೆಯಲ್ಲೇ ಮೊದಲ ಬಾರಿಗೆ ವಾಕ್-ಶ್ರವಣ ದೋಷವುಳ್ಳ ಬೆಂಗಳೂರಿನ ನ್ಯಾಯವಾದಿಯೊಬ್ಬರು ಸಂಕೇತ ಭಾಷೆಯ ಮೂಲಕ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರ ಮುಂದೆ ತಮ್ಮ ಪ್ರಕರಣದ ವಾದ ಮಂಡಿಸಿದ್ದಾರೆ. ಇದರೊಂದಿಗೆ ಅಂಗವಿಕಲ ನ್ಯಾಯವಾದಿಗಳು ತಮ್ಮ ಪ್ರಕರಣಗಳ ವಾದ ಮಂಡಿಸಲು ದಾರಿ ಮಾಡಿ ಕೊಟ್ಟಂತಾಗಿದೆ.

ವಾಕ್-ಶ್ರವಣ ದೋಷವುಳ್ಳ ನ್ಯಾಯವಾದಿ ಸಾರಾ ಸನ್ನಿ ಭಾರತೀಯ ಸಂಕೇತ ಭಾಷೆಗಳ ವ್ಯಾಖ್ಯಾನಕಾರನ ಮೂಲಕ ಸುಪ್ರೀಂ ಕೋರ್ಟ್ನಲ್ಲಿ ಶುಕ್ರವಾರ ವಾದ ಮಂಡಿಸಿದ್ದಾರೆ. ವ್ಯಾಖ್ಯಾನಕಾರರ ಮೂಲಕ ಪ್ರಕರಣದಲ್ಲಿ ವಾದ ಮಂಡಿಸಲು ಸಾರಾ ಸನ್ನಿಗೆ ಅವಕಾಶ ನೀಡುವಂತೆ ಹಿರಿಯ ನ್ಯಾಯವಾದಿ ಸಂಚಿತಾ ಐನ್ ಅವರು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರಲ್ಲಿ ಮನವಿ ಮಾಡಿದರು. ಅವರು ಕೂಡಲೇ ಅನುಮತಿ ನೀಡಿದರು.

ವರ್ಚುವಲ್ ವಿಚಾರಣೆಯನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿರುವ ನಿಯಂತ್ರಣ ಕೊಠಡಿ ಸಾರಾ ಹಾಗೂ ಅವರ ವ್ಯಾಖ್ಯಾನಕಾರನಿಗೆ ಅವಕಾಶ ಮಾಡಿ ಕೊಟ್ಟಿರುವುದರಿಂದ ಈ ಐತಿಹಾಸಿಕ ಕ್ಷಣ ಸಂಭವಿಸಿದೆ. ಮುಖ್ಯ ನ್ಯಾಯಮೂರ್ತಿ ಅನುಮತಿ ನೀಡುವುದರೊಂದಿಗೆ ನಿಯಂತ್ರಣ ಕೊಠಡಿಯಲ್ಲಿ ಬೆಂಗಳೂರು ಮೂಲದ ನ್ಯಾಯವಾದಿ ಸಾರಾ ಹಾಗೂ ಅವರ ವ್ಯಾಖ್ಯಾನಕಾರ ಸೌರವ್ ರಾಯ್ಚೌಧುರಿ ಅವರು ವರ್ಚುವಲ್ ಆಗಿ ವಿಚಾರಣೆಗೆ ಹಾಜರಾದರು.

ಸಾರಾ ಅವರ ಸರದಿ ಬಂದಾಗ ಅವರ ವ್ಯಾಖ್ಯಾನಕಾರ ಮುಂದೆ ಬಂದು ವಿಶ್ವ ಹಾಗೂ ಅವರ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸಿದರು. ಈ ಪ್ರಕ್ರಿಯೆಯಲ್ಲಿ ಸಾರಾ ಅವರು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಂದ ಪ್ರಶಂಶೆಗೆ ಒಳಗಾದರು. ಸಾರಾ ಅವರ ಬದ್ಧತೆ ಹೆಚ್ಚಿನ ಅಡೆತಡೆಗಳನ್ನು ಮುರಿದಿದೆ. ಮುಖ್ಯ ನ್ಯಾಯಮೂರ್ತಿ ಅವರು ಕಳೆದ ವರ್ಷ ನವೆಂಬರ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭ, ‘‘ನನ್ನ ಕೆಲಸವನ್ನು ಹೇಳುವುದಿಲ್ಲ, ಮಾಡಿ ತೋರಿಸುತ್ತೇನೆ’’ ಎಂದಿದ್ದರು. ಈ ಹೇಳಿಕೆಗೆ ಅನುಗುಣವಾಗಿ ಅವರು ನ್ಯಾಯವಾದಿ ಎಸ್.ಆರ್. ಭಟ್ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದ್ದರು. ಈ ಸಮಿತಿಯ ಉದ್ದೇಶ ಸುಪ್ರೀಂ ಕೋರ್ಟ್ ಆವರಣ ಹಾಗೂ ಅದರ ಕಾರ್ಯಾಚರಣೆಗಳ ಸಮಗ್ರ ಪ್ರವೇಶದ ಪರಿಶೋಧನೆ ನಡೆಸವುದಾಗಿದೆ.

ಸುಪ್ರೀಂ ಕೋರ್ಟ್ ಗೆ ಭೇಟಿ ನೀಡುವ ಅಂಗವಿಕಲರನ್ನು ತಲುಪುವುದು, ಅವರು ಎದುರಿಸುತ್ತಿರುವ ಸವಾಲುಗಳ ಸ್ವರೂಪ ಹಾಗೂ ವ್ಯಾಪ್ತಿಯನ್ನು ಅಂದಾಜಿಸುವುದು. ಈ ಕ್ರಮದ ಅಂತಿಮ ಗುರಿ ಎಲ್ಲರಿಗೂ ನ್ಯಾಯದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಹಾಗೂ ಸುಪ್ರೀಂ ಕೋರ್ಟ್ ನೊಂದಿಗಿನ ಸಂವಾದದಲ್ಲಿ ಅಂಗವಿಕಲರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಳವಾಗಿ ಅರ್ಥ ಮಾಡಿಕೊಳ್ಳುವುದಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News