ʼಬಲವಂತದ ಒಕ್ಕಲೆಬ್ಬಿಸುವಿಕೆʼ: ಎರಡು ವರ್ಷಗಳಲ್ಲಿ ಭಾರತದಲ್ಲಿ ನಿರ್ವಸಿತರಾದ ಏಳು ಲಕ್ಷ ಜನರು; ವರದಿ

Update: 2024-03-06 11:45 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಕಳೆದ ಎರಡು ವರ್ಷಗಳಲ್ಲಿ (1-1-2022ರಿಂದ 31-12-2023ರವರೆಗೆ) ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಮಟ್ಟಗಳಲ್ಲಿ ಸರಕಾರಿ ಅಧಿಕಾರಿಗಳು 1.5 ಲಕ್ಷಕ್ಕೂ ಅಧಿಕ ಮನೆಗಳನ್ನು ನೆಲಸಮಗೊಳಿಸಿದ್ದಾರೆ. ಪರಿಣಾಮವಾಗಿ 7.4 ಲಕ್ಷಕ್ಕೂ ಅಧಿಕ ಜನರು ತಮ್ಮ ಮನೆಗಳಿಂದ ಬಲವಂತದಿಂದ ಹೊರದಬ್ಬಲ್ಪಟ್ಟಿದ್ದಾರೆ ಎಂದು ಹೌಸಿಂಗ್ ಆ್ಯಂಡ್ ಲ್ಯಾಂಡ್ ರೈಟ್ಸ್ ನೆಟ್‌ವರ್ಕ್ (ಎಚ್‌ಎಲ್‌ಆರ್‌ಎನ್) ಬಿಡುಗಡೆಗೊಳಿಸಿರುವ ನೂತನ ವರದಿಯು ತಿಳಿಸಿದೆ ಎಂದು ವರದಿಯಾಗಿದೆ.

‘ಭಾರತದಲ್ಲಿ ಬಲವಂತದ ಒಕ್ಕಲೆಬ್ಬಿಸುವಿಕೆಗಳು: 2022 & 2023’ ಶೀರ್ಷಿಕೆಯ ವರದಿಯ ಪ್ರಕಾರ, 2023ರಲ್ಲಿ ಪ್ರತಿದಿನ 294 ಮನೆಗಳನ್ನು ಧ್ವಂಸಗೊಳಿಸಲಾಗಿದೆ ಮತ್ತು ಪ್ರತಿ ಗಂಟೆಗೆ 58 ಜನರನ್ನು ಒಕ್ಕಲೆಬ್ಬಿಸಲಾಗಿದೆ.

2023ರಲ್ಲಿ ನೆಲಸಮ ಕಾರ್ಯಾಚರಣೆಗಳು ಅಭೂತಪೂರ್ವ ವೇಗ ಮತ್ತು ಪ್ರಮಾಣದಲ್ಲಿ ನಡೆದಿದ್ದವು ಮತ್ತು ದೇಶಾದ್ಯಂತ 5,15,752 ಜನರು ಬಲವಂತದಿಂದ ತಮ್ಮ ಮನೆಗಳಿಂದ ಹೊರದಬ್ಬಲ್ಪಟ್ಟಿದ್ದರು ಹಾಗೂ 1,07,449 ಮನೆಗಳನ್ನು ಧ್ವಂಸಗೊಳಿಸಲಾಗಿತ್ತು ಎಂದು ದತ್ತಾಂಶಗಳು ತೋರಿಸಿವೆ.

ಎಚ್‌ಎಲ್‌ಆರ್‌ಎನ್ ಈ ಸರಣಿ ವರದಿಗಳನ್ನು ಪ್ರಕಟಿಸಲು ಆರಂಭಿಸಿದಾಗಿನಿಂದ ಕಳೆದ ಏಳು ವರ್ಷಗಳಲ್ಲಿ ಇವು ಗರಿಷ್ಠ ವಾರ್ಷಿಕ ಅಂಕಿಸಂಖ್ಯೆಗಳಾಗಿವೆ.

ವರದಿಯಲ್ಲಿ ಉಲ್ಲೇಖಿಸಲಾಗಿರುವ ಅಂಕಿಸಂಖ್ಯೆಗಳು ಎಚ್‌ಎಲ್‌ಆರ್‌ಎನ್‌ಗೆ ತಿಳಿದಿದ್ದ ಪ್ರಕರಣಗಳನ್ನು ಮಾತ್ರ ಪ್ರತಿಬಿಂಬಿಸಿವೆ. ಹೀಗಾಗಿ ದೇಶದಲ್ಲಿ ತಮ್ಮ ಮನೆಗಳಿಂದ ಹೊರದಬ್ಬಲ್ಪಟ್ಟವರ ಮತ್ತು ಇಂತಹ ಅಪಾಯವನ್ನು ಎದುರಿಸುತ್ತಿರುವವರ ಒಟ್ಟು ಸಂಖ್ಯೆಯು ಇನ್ನೂ ಹೆಚ್ಚಾಗಿರುವ ಸಾಧ್ಯತೆಯಿದೆ ಎಂದು ಹೇಳಿಕೆಯು ತಿಳಿಸಿದೆ.

2022 ಮತ್ತು 2023ರಲ್ಲಿ ಗರಿಷ್ಠ ಶೇಕಡಾವಾರು (58.7) ಜನರನ್ನು ಕೊಳಗೇರಿ ನಿರ್ಮೂಲನ, ಅತಿಕ್ರಮಣ ತೆರವು ಮತ್ತು ನಗರ ಸುಂದರೀಕರಣ ಉಪಕ್ರಮಗಳ ಹೆಸರಿನಲ್ಲಿ ಒಕ್ಕಲೆಬ್ಬಿಸಲಾಗಿತ್ತು ಎಂದು ವರದಿಯಾಗಿದೆ.

2022 ಮತ್ತು 2023ರಲ್ಲಿ ದಿಲ್ಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶವು ಅತ್ಯಂತ ಹೆಚ್ಚಿನ (78) ತೆರವುಗೊಳಿಸುವಿಕೆ ಘಟನೆಗಳನ್ನು ದಾಖಲಿಸಿದೆ. 2023ರಲ್ಲಿ ದಿಲ್ಲಿಯ ವಿವಿಧ ಸರಕಾರಿ ಅಧಿಕಾರಿಗಳು ಸುಮಾರು 2.8 ಲಕ್ಷ ಜನರನ್ನು ಅವರ ಮನೆಗಳಿಂದ ಹೊರಹಾಕಿದ್ದು, ಇದು ಆ ವರ್ಷ ಭಾರತದಲ್ಲಿಯ ಇತರ ಸ್ಥಳಗಳಿಗೆ ಹೋಲಿಸಿದರೆ ಗರಿಷ್ಠವಾಗಿದೆ.

2022-23ರಲ್ಲಿ ಸರ್ವೋಚ್ಚ ನ್ಯಾಯಾಲಯ, ಉಚ್ಚ ನ್ಯಾಯಾಲಯಗಳು ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಸೇರಿದಂತೆ ನ್ಯಾಯಾಲಯಗಳ ಆದೇಶಗಳು 2.9 ಲಕ್ಷಕ್ಕೂ ಅಧಿಕ ಜನರ ಒಕ್ಕಲೆಬ್ಬಿಸುವಿಕೆಗೆ ಕಾರಣವಾಗಿದ್ದವು.

ಲಭ್ಯ ಮಾಹಿತಿಗಳಂತೆ ಈ ಎರಡೂ ವರ್ಷಗಳಲ್ಲಿ ಕನಿಷ್ಠ ಶೇ.31ರಷ್ಟು ಸಂತ್ರಸ್ತರು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು, ಇತರ ಹಿಂದುಳಿದ ವರ್ಗಗಳು, ಅಲೆಮಾರಿ ಸಮುದಾಯಗಳು, ವಲಸೆ ಕಾರ್ಮಿಕರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ಸೇರಿದಂತೆ ದುರ್ಬಲ ವರ್ಗಗಳಿಗೆ ಸೇರಿದವರಾಗಿದ್ದಾರೆ.

ದೇಶಾದ್ಯಂತ ವಿವಿಧ ಕಾರಣಗಳಿಂದಾಗಿ ಸುಮಾರು 1.7 ಕೋಟಿ ಜನರು ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರದ ಬೆದರಿಕೆಯಡಿ ಬದುಕು ಸಾಗಿಸುತ್ತಿದ್ದಾರೆ ಎಂದು ಎಚ್‌ಆರ್‌ಎಲ್‌ಎನ್ ವರದಿಯು ಅಂದಾಜಿಸಿದೆ.

ವರದಿಯು ‘ಯಾವುದೇ ಕಾರಣದಿಂದ ಒಕ್ಕಲೆಬ್ಬಿಸುವಿಕೆಗೆ ತಕ್ಷಣದ ತಾತ್ಕಾಲಿಕ ತಡೆ’ ಸೇರಿದಂತೆ ಕೆಲವು ಶಿಫಾರಸುಗಳನ್ನೂ ಮಾಡಿದೆ.

ಇತರ ಸಲಹೆಗಳೊಂದಿಗೆ,ನಿವಾಸಿಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುವ ಮತ್ತು ಅವರ ಬಲವಂತದ ತೆರವಿಗೆ ಕಾರಣವಾಗುವ ‘ಕಾನೂನುಬಾಹಿರತೆ’ ಮತ್ತು ‘ಅತಿಕ್ರಮಣ’ ಪದಗಳ ಅಧಿಕಾರ್ಥವನ್ನು ತೆಗೆದುಹಾಕಲು ಎಲ್ಲ ಅನೌಪಚಾರಿಕ ಬಡಾವಣೆಗಳನ್ನು ಗುರುತಿಸಿ ಅವುಗಳನ್ನು ಕಾನೂನುಬದ್ಧ ಮನೆಗಳ ಗುಂಪುಗಳನ್ನಾಗಿ ಪಟ್ಟಿ ಮಾಡುವಂತೆ ವರದಿಯು ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News