ಸಂತ ಫ್ರಾನ್ಸಿಸ್ ಬಗ್ಗೆ ವಿವಾದಾತ್ಮಕ ಹೇಳಿಕೆ: ತಲೆಮರೆಸಿಕೊಂಡ ಆರೆಸ್ಸೆಸ್ ಗೋವಾ ಘಟಕದ ಮಾಜಿ ಮುಖ್ಯಸ್ಥ

Update: 2024-10-06 10:26 GMT

ಸುಭಾಷ್ ವೆಲಿಂಗ್ಕರ್ (Photo: PTI)

ಪಣಜಿ: ಸಂತ ಫ್ರಾನ್ಸಿಸ್ ಕ್ಸೇವಿಯರ್ ಅವರ ವಿರುದ್ಧದ ವಿವಾದಾತ್ಮಕ ಹೇಳಿಕೆಗೆ ಪ್ರಕರಣ ದಾಖಲಾದ ಬಳಿಕ ಆರೆಸ್ಸೆಸ್ ಗೋವಾ ಘಟಕದ ಮಾಜಿ ಮುಖ್ಯಸ್ಥ ಸುಭಾಷ್ ವೆಲಿಂಗ್ಕರ್ ತಲೆಮರೆಸಿಕೊಂಡಿದ್ದಾರೆ ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ.

ಸಂತ ಫ್ರಾನ್ಸಿಸ್ ಕ್ಸೇವಿಯರ್ ವಿರುದ್ಧ ಆರೆಸ್ಸೆಸ್ ಗೋವಾ ಘಟಕದ ಮಾಜಿ ಮುಖ್ಯಸ್ಥ ಸುಭಾಷ್ ವೆಲಿಂಗ್ಕರ್ ನೀಡಿದ ಹೇಳಿಕೆ ವಿರುದ್ಧ ಗೋವಾದಲ್ಲಿ ವ್ಯಾಪಕ ಪ್ರತಿಭಟನೆ ನಡೆದಿತ್ತು.

ಎಎಪಿ ಶಾಸಕ ಕ್ರೂಜ್ ಸಿಲ್ವಾ ಅವರ ದೂರಿನ ಆಧಾರದ ಮೇಲೆ ಶುಕ್ರವಾರ ರಾತ್ರಿ ಉತ್ತರ ಗೋವಾದ ಬಿಚೋಲಿಮ್ ಪೊಲೀಸ್ ಠಾಣೆಯಲ್ಲಿ ಸುಭಾಷ್ ವೆಲಿಂಗ್ಕರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಎಫ್ಐಆರ್ ನಲ್ಲಿ ಸುಭಾಷ್ ವೆಲಿಂಗ್ಕರ್ ದುರುದ್ದೇಶಪೂರಿತವಾಗಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಭಾಷಣವನ್ನು ಮಾಡಿದ್ದಾರೆ ಮತ್ತು ಇತರರ ನಂಬಿಕೆಗೆ ಘಾಸಿಗೊಳಿಸಿದ್ದಾರೆಂದು ಉಲ್ಲೇಖಿಸಲಾಗಿತ್ತು.

ಸಂತ ಫ್ರಾನ್ಸಿಸ್ ಕ್ಸೇವಿಯರ್ ಅವರ ಮೃತದೇಹದ ಅವಶೇಷಗಳ ಡಿಎನ್ಎ ಪರೀಕ್ಷೆ ನಡೆಸಬೇಕೆಂದು ವೆಲಿಂಗ್ಕರ್ ಹೇಳಿಕೆಯ ನಂತರ, ಧಾರ್ಮಿಕ ಭಾವನೆಗೆ ಧಕ್ಕೆ ಆರೋಪದಲ್ಲಿ ವೆಲಿಂಗ್ಕರ್ ವಿರುದ್ಧ ಗೋವಾದ ವಿವಿಧ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 299ರ ಅಡಿಯಲ್ಲಿ ಎಫ್ ಐಆರ್ ದಾಖಲಾಗಿದೆ.

ಸುಭಾಷ್ ವೆಲಿಂಗ್ಕರ್ ಅವರ ಹೇಳಿಕೆ ಖಂಡಿಸಿ ಕಾಂಗ್ರೆಸ್ ಮತ್ತು ಎಎಪಿ ಭಾರೀ ಪ್ರತಿಭಟನೆಯನ್ನು ನಡೆಸಿದೆ. ವೆಲಿಂಗ್ಕರ್ ಬಂಧನಕ್ಕೆ ಆಗ್ರಹಿಸಿ ಮಾರ್ಗವೊ ಪೊಲೀಸ್ ಠಾಣೆ ಮುಂದೆ 300ಕ್ಕೂ ಹೆಚ್ಚು ಕಾಂಗ್ರೆಸ್ ಮತ್ತು ಎಎಪಿ ಕಾರ್ಯಕರ್ತರು ಜಮಾಯಿಸಿದ್ದರು. ಪ್ರತಿಭಟನಾಕಾರರು ಮಾರ್ಗೋವ್, ಅಂಜುನಾ ಮತ್ತು ಓಲ್ಡ್ ಗೋವಾದಲ್ಲಿ ರಸ್ತೆಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. ಮಾರ್ಗೋವಾದಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಆರೋಪಿಗಳನ್ನು ಶೀಘ್ರವೇ ಬಂಧಿಸದಿದ್ದರೆ ಜುವಾರಿ ಬಿಡ್ಜ್ ಗೆ ಮುತ್ತಿಗೆ ಹಾಕುವುದಾಗಿ ಪ್ರತಿಭಟನಾಕಾರರು ಬೆದರಿಕೆ ಹಾಕಿದ್ದಾರೆ.

ಈ ಮಧ್ಯೆ ಶಾಂತಿ ಕಾಪಾಡುವಂತೆ ಗೋವಾ ಸಿಎಂ ಪ್ರಮೋದ್ ಸಾವಂತ್ ಜನರಿಗೆ ಮನವಿ ಮಾಡಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News