ಕೇರಳದ ಮಾಜಿ ಸಚಿವ, ಮುಸ್ಲಿಂ ಲೀಗ್ ನಾಯಕ ಕುಟ್ಟಿ ಅಹಮ್ಮದ್ ಕುಟ್ಟಿ ನಿಧನ
ಮಲಪ್ಪುರಂ: ಮುಸ್ಲಿಂ ಲೀಗ್ ನಾಯಕ ಹಾಗೂ ಮಾಜಿ ಸಚಿವ ಕೆ.ಕುಟ್ಟಿ ಅಹಮ್ಮದ್ ಕುಟ್ಟಿ ಅವರು ರವಿವಾರ ತನೂರ್ ನಲ್ಲಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. 2004ರ ಉಮ್ಮನ್ ಚಾಂಡಿ ಸಚಿವ ಸಂಪುಟದಲ್ಲಿ ಕುಟ್ಟಿ ಅಹಮ್ಮದ್ ಕುಟ್ಟಿ ಸ್ಥಳೀಯ ಸಂಸ್ಥೆಗಳ ಸಚಿವರಾಗಿದ್ದರು.
ಜನವರಿ 15, 1953ರಲ್ಲಿ ಮಲಪ್ಪುರಂನಲ್ಲಿ ಜನಿಸಿದ ಕುಟ್ಟಿ ಅಹಮದ್ ಕುಟ್ಟಿ, ಕಾರ್ಮಿಕ ಸಂಘಟನೆಯ ಮೂಲಕ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದರು. 1992ರಲ್ಲಿ ತನೂರ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಚುನಾಯಿತರಾಗುವ ಮೂಲಕ ಅವರು ಪ್ರಪ್ರಥಮ ಬಾರಿಗೆ ಶಾಸಕರಾಗಿದ್ದರು. ಮೂರು ಬಾರಿ ಶಾಸಕರಾದ ಕುಟ್ಟಿ ಅಹಮದ್ ಕುಟ್ಟಿ, ತಿರುಂಗಡಿ ವಿಧಾನಸಭಾ ಕ್ಷೇತ್ರದಿಂದ 2001 ಹಾಗೂ 2006ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು.
ಕುಟ್ಟಿ ಅಹಮದ್ ಕುಟ್ಟಿ ತಮ್ಮ ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.
ಕುಟ್ಟಿ ಅಹಮದ್ ಕುಟ್ಟಿ ಅವರ ನಿಧನಕ್ಕೆ ಮುಸ್ಲಿಂ ಲೀಗ್ ನಾಯಕ ಪಿ.ಕೆ.ಕುನ್ಹಲಿಕುಟ್ಟಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಕುಟ್ಟಿ ನಿಧನದಿಂದ ಪಕ್ಷಕ್ಕೆ ತೀವ್ರ ನಷ್ಟವಾಗಿದೆ ಎಂದೂ ಅವರು ಹೇಳಿದ್ದಾರೆ.