ಭಾರತದ ಲೋಕಪಾಲರಾಗಿ ಸುಪ್ರೀಂಕೋರ್ಟ್ ನ ಮಾಜಿ ನ್ಯಾಯಾಧೀಶ ಎ.ಎಂ. ಖನ್ವಿಲ್ಕರ್ ನೇಮಕ ಸಾಧ್ಯತೆ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ, ಮುಖ್ಯ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್ ಹಾಗೂ ಅತಿ ದೊಡ್ಡ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನೊಳಗೊಂಡ ಉನ್ನತ ಸಮಿತಿಯು ಭಾರತದ ಲೋಕಪಾಲ ಹುದ್ದೆಗೆ ಅಂತಿಮಗೊಳಿಸಲಾಗಿದ್ದ ಹೆಸರುಗಳನ್ನು ಚರ್ಚಿಸಿದ್ದು, ಸುಪ್ರೀಂಕೋರ್ಟ್ ಮಾಜಿ ನ್ಯಾಯಮೂರ್ತಿ ಎ.ಎಂ.ಖನ್ವಿಲ್ಕರ್ ಭಾರತದ ನೂತನ ಲೋಕಪಾಲರಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ ಎಂದು thehindu.com ವರದಿ ಮಾಡಿದೆ.
ಮಾಜಿ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಕೂಡಾ ಲೋಕಪಾಲರ ಆಯ್ಕೆ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದರು.
ಇದರೊಂದಿಗೆ ಕೇಂದ್ರ ವಿಚಕ್ಷಣಾ ಆಯೋಗದ ಮುಖ್ಯಸ್ಥರ ಹುದ್ದೆಗೆ ನಡೆಸಲಾದ ಪ್ರತ್ಯೇಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಅಧೀರ್ ರಂಜನ್ ಚೌಧರಿ ಉಪಸ್ಥಿತರಿದ್ದರು.
ಕೇಂದ್ರ ವಿಚಕ್ಷಣಾ ಆಯೋಗದ ಮುಖ್ಯಸ್ಥರ ಹುದ್ದೆಗೆ ಬ್ಯಾಂಕ್ ಆಫ್ ಮಹಾರಾಷ್ಟ್ರದ ವ್ಯವಸ್ಥಾಪಕ ನಿರ್ದೇಶಕರಾದ ಎ.ಎಸ್.ರಾಜೀವ್ ಅವರ ಹೆಸರನ್ನು ಆಯ್ಕೆ ಮಾಡಲಾಗಿದ್ದು, ಇದಕ್ಕೆ ಅಧೀರ್ ರಂಜನ್ ಚೌಧರಿ ತಮ್ಮ ಭಿನ್ನಮತ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಧೀರ್ ರಂಜನ್ ಚೌಧರಿ ಅವರು ಮಾಜಿ ಬ್ಯಾಂಕರ್ ಆದ ಅತನು ದಾಸ್ ಅವರ ಹೆಸರನ್ನು ಕೇಂದ್ರ ವಿಚಕ್ಷಣಾ ಆಯೋಗದ ಮುಖ್ಯಸ್ಥರ ಹುದ್ದೆಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.