ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಚುನಾವಣೆ ಮತ ಎಣಿಕೆ: ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ ತಾಂತ್ರಿಕ ದೋಷ

Update: 2024-11-23 05:12 GMT

Photo credit: PTI

ಹೊಸದಿಲ್ಲಿ: ಭಾರಿ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿರುವಾಗಲೇ, ಭಾರತೀಯ ಚುನಾವಣಾ ಆಯೋಗದ ವೆಬ್ ಸೈಟ್ ನ ‘results.eci.gov.in’ ವಿಭಾಗವು ಶನಿವಾರ ಬೆಳಗ್ಗೆ ತಾಂತ್ರಿಕ ದೋಷಕ್ಕೆ ತುತ್ತಾಗಿದೆ.

ಚುನಾವಣಾ ಆಯೋಗದ ವೆಬ್ ಸೈಟ್ ಗೆ ಭೇಟಿ ನೀಡುತ್ತಿರುವವರಿಗೆ ನಿಷ್ಕ್ರಿಯ ಲಿಂಕ್‌ ಗಳು ಲಭ್ಯವಾಗುತ್ತಿದ್ದು, ‘ಮತ ಎಣಿಕೆ ಪ್ರಗತಿಯಲ್ಲಿದೆ’ ಎಂಬ ಸಾಮಾನ್ಯ ಸಂದೇಶ ಕಂಡು ಬರುತ್ತಿದೆ. ಇದರಿಂದ ಚುನಾವಣಾ ಫಲಿತಾಂಶದ ಕ್ಷಣಕ್ಷಣದ ಮಾಹಿತಿ ದೊರೆಯುತ್ತಿಲ್ಲ. ಈ ಅಡಚಣೆಗೆ ಭಾರತೀಯ ಚುನಾವಣಾ ಆಯೋಗವು ಯಾವುದೇ ಅಧಿಕೃತ ವಿವರಣೆ ನೀಡಿಲ್ಲ.

ಇಂದು ಬೆಳಗ್ಗೆ 8 ಗಂಟೆಗೆ ಅಂಚೆ ಮತಪತ್ರಗಳ ಎಣಿಕೆಯ ಮೂಲಕ ಮತ ಎಣಿಕೆ ಕಾರ್ಯ ಪ್ರಾರಂಭಗೊಂಡಿದ್ದು, ಮಹಾರಾಷ್ಟ್ರದ 288 ಕ್ಷೇತ್ರಗಳು ಹಾಗೂ ಜಾರ್ಖಂಡ್ ನ 81 ಕ್ಷೇತ್ರಗಳಲ್ಲಿ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ. ಆರಂಭಿಕ ಟ್ರೆಂಡ್ ಗಳ ಪ್ರಕಾರ, ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟ 200 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ವಿರೋಧ ಪಕ್ಷಗಳ ಮೈತ್ರಿಕೂಟವಾದ ಮಹಾವಿಕಾಸ್ ಅಘಾಡಿ 54 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಜಾರ್ಖಂಡ್ ನಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವು 29 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಆಡಳಿತಾರೂಢ ಜೆಎಂಎಂ ನೇತೃತ್ವದ ಮೈತ್ರಿಕೂಟವು 50 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಇದರೊಂದಿಗೆ, ದೇಶಾದ್ಯಂತ 13 ರಾಜ್ಯಗಳ 48 ವಿಧಾನಸಭಾ ಕ್ಷೇತ್ರಗಳು ಹಾಗೂ ಮಹಾರಾಷ್ಟ್ರದ ನಾಂದೇಡ್ ಹಾಗೂ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರ ಸೇರಿದಂತೆ ಎರಡು ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಗಳ ಮತ ಎಣಿಕೆಯೂ ಪ್ರಗತಿಯಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News