ವಂಚನೆ ಪ್ರಕರಣ: ಅಮೆರಿಕದಿಂದಲೇ ಬೆಂಗಳೂರು ಪೊಲೀಸ್ ಆಯುಕ್ತರಿಗೆ ವ್ಯಕ್ತಿಯಿಂದ ದೂರು
ಬೆಂಗಳೂರು: ನಿವೇಶನ ಕೊಡಿಸುವುದಾಗಿ ನಂಬಿಸಿ ಹಂತ-ಹಂತವಾಗಿ 30 ಲಕ್ಷ ರೂ. ಹಣ ಪಡೆದು ವಂಚಿಸಿರುವ ಆರೋಪ ಕೇಳಿಬಂದಿದ್ದು, ನ್ಯಾಯ ಕೊಡಿಸುವಂತೆ ಅಮೆರಿಕದಿಂದ ವಂಚನೆಗೊಳಗಾದ ಬೆಂಗಳೂರು ಮೂಲದ ಅನಿವಾಸಿ ಭಾರತೀಯ (ಎನ್‍ಆರ್‍ಐ) ನಗರ ಪೊಲೀಸ್ ಆಯುಕ್ತರಿಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ದೂರು ನೀಡಿದ್ದಾರೆ.
ರಾಘವೇಂದ್ರ ಪ್ರಸಾದ್ ಎಂಬುವರು ಅಮೆರಿಕದಲ್ಲಿ ಹಲವು ವರ್ಷಗಳಿಂದ ಕಂಪೆನಿಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದು, ನಿವೇಶನ ಕೊಡಿಸುವುದಾಗಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಜೆ.ಪಿ. ನಗರದಲ್ಲಿರುವ ಖಾಸಗಿ ಕಂಪೆನಿ ಮಾಲಕರಾದ ಅರವಿಂದ್ ಹಾಗೂ ಹರಿಕೃಷ್ಣ ಎಂಬುವರು ತಮಗೆ 30 ಲಕ್ಷ ರೂ. ವಂಚಿಸಿದ್ದಾರೆ ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಹಲವು ವರ್ಷಗಳಿಂದ ಅಮೆರಿಕದ ಕಂಪೆನಿಯೊಂದರಲ್ಲಿ ರಾಘವೇಂದ್ರ ಅವರು ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪೋಷಕರು ಹಾಗೂ ಸಂಬಂಧಿಗಳೆಲ್ಲರೂ ಬೆಂಗಳೂರಲ್ಲಿದ್ದಾರೆ. ಹೀಗಾಗಿ ಸ್ವಂತ ಮನೆ ಕಟ್ಟುವ ಸಲುವಾಗಿ ನಿವೇಶನ ಖರೀದಿಗೆ ಮುಂದಾಗಿದ್ದರು. ಈ ವೇಳೆ ರಿಯಲ್ ಎಸ್ಟೇಟ್ ಕಂಪೆನಿಯು ಕೆಂಗೇರಿಯಲ್ಲಿ ರಾಯಲ್ ನಿಸರ್ಗ ಲೇಔಟ್ ನಲ್ಲಿ ಸೈಟುಗಳಿವೆ ಎಂದು ಜಾಹೀರಾತು ನೀಡಿತ್ತು. ಈ ಬಗ್ಗೆ ವಿಚಾರಿಸಿ ಕಂಪೆನಿಯೊಂದಿಗೆ ಮಾತುಕತೆ ಬಳಿಕ 2022ರ ಡಿಸೆಂಬರ್‍ನಲ್ಲಿ 30 ಲಕ್ಷಕ್ಕೆ ಸೈಟು ಖರೀದಿಗೆ ಒಪ್ಪಂದವಾಗಿತ್ತು. ಹಂತ-ಹಂತವಾಗಿ ರಾಘವೇಂದ್ರ ಅವರು 30 ಲಕ್ಷ ರೂ. ಹಣವನ್ನು ಕಂಪೆನಿಗೆ ಪಾವತಿಸಿದ್ದರು.
ಕಾಲಕ್ರಮೇಣ ನಿವೇಶನ ನೀಡುವುದಾಗಿ ಭರವಸೆ ನೀಡಿದ್ದ ಕಂಪೆನಿಯು ಕೊಟ್ಟ ಮಾತಿನಂತೆ ನಡೆದುಕೊಂಡಿರಲಿಲ್ಲ. ಅಲ್ಲದೆ ನಿವೇಶನ ನೋಂದಣಿ ಮಾಡಿಸದೆ ತಿಂಗಳುಗಟ್ಟಲೇ ಕಂಪೆನಿಯು ಅಲೆದಾಡಿಸಿತ್ತು. ಈ ಬಗ್ಗೆ ಕುಟುಂಬಸ್ಥರು ವಿಚಾರಿಸಿದರೂ ಪ್ರಯೋಜನವಾಗಿರಲಿಲ್ಲ. ಅಂತಿಮವಾಗಿ ನಿವೇಶನ ಬೇಡ ಎಂದು ನಿರ್ಧರಿಸಿ ನೀಡಿದ ಹಣವನ್ನು ವಾಪಸ್ ಕೊಡುವಂತೆ ಮನವಿ ಮಾಡಿದರೂ, ರಿಫಂಡ್ ಮಾಡದೆ ಯಾಮಾರಿಸಿದೆ. ಈ ಬಗ್ಗೆ ಜೆ.ಪಿ. ನಗರ ಪೊಲೀಸ್ ಠಾಣೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ರಾಘವೇಂದ್ರ ಆರೋಪಿಸಿದ್ದಾರೆ.
ವಂಚನೆ ಎಸಗಿದ ಕಂಪೆನಿ ಮೇಲೆ ಕಾನೂನು ಕ್ರಮ ಜರುಗಿಸಿ ಹಣ ವಾಪಸ್ ನೀಡಿಸುವಂತೆ ಪೊಲೀಸರಲ್ಲಿ ಮನವಿ ಮಾಡಿರುವ ರಾಘವೇಂದ್ರ, ಅಲ್ಲದೆ ಇದೇ ರೀತಿ ಹಲವು ಗ್ರಾಹಕರಿಗೆ ಕಂಪೆನಿ ವಂಚಿಸಿರುವುದಾಗಿ ದೂರಿದ್ದಾರೆ.