ಶಿವಸೇನಾ (ಯುಬಿಟಿ)ದಿಂದ ಚುನಾವಣಾ ಪ್ರಣಾಳಿಕೆ ಬಿಡುಗಡೆ | ಉಚಿತ ಶಿಕ್ಷಣ, ಧಾರಾವಿ ಯೋಜನೆ ರದ್ದುಗೊಳಿಸುವ ಭರವಸೆ

Update: 2024-11-07 15:37 GMT

ಉದ್ಧವ್ ಠಾಕ್ರೆ | PTI  

ಮುಂಬೈ : ಮಹಾರಾಷ್ಟ್ರ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಪಕ್ಷದ ಪ್ರಣಾಳಿಕೆಯನ್ನು ಗುರುವಾರ ಬಿಡುಗಡೆಗೊಳಿಸಿದ್ದಾರೆ.

ಪ್ರಣಾಳಿಕೆಯಲ್ಲಿ ವಿದ್ಯಾರ್ಥಿಗಳಿಗೆ ಕೂಡ ಉಚಿತ ಶಿಕ್ಷಣ, ಅಗತ್ಯದ ವಸ್ತುಗಳ ಬೆಲೆಯಲ್ಲಿ ಸ್ಥಿರತೆ ಹಾಗೂ ಧಾರಾವಿ ಮರು ಅಭಿವೃದ್ಧಿ ಯೋಜನೆಯ ರದ್ದು ಮೊದಲಾದ ಭರವಸೆಗಳನ್ನು ನೀಡಿದ್ದಾರೆ.

ಹೆಚ್ಚಿನ ಚುನಾವಣಾ ಭರವಸೆಗಳು ಪ್ರತಿಪಕ್ಷವಾದ ಮಹಾ ವಿಕಾಸ ಅಘಾಡಿ (ಎಂವಿಎ)ಯ ಒಟ್ಟು ಭರವಸೆಗಳ ಭಾಗವಾಗಿದೆ. ಆದರೆ, ವಿಶೇಷವಾಗಿ ಗಮನಹರಿಸಬೇಕಾದ ಕೆಲವು ಅಂಶಗಳು ಇದರಲ್ಲಿವೆ ಎಂದು ಠಾಕ್ರೆ ಹೇಳಿದ್ದಾರೆ.

ಶಿವಸೇನೆ (ಯುಬಿಟಿ), ಕಾಂಗ್ರೆಸ್ ಹಾಗೂ ಶರದ್ ಪವಾರ್ ಎನ್‌ಸಿಪಿ (ಎಸ್‌ಪಿ)ಯನ್ನು ಒಳಗೊಂಡ ಮಹಾ ವಿಕಾಸ ಅಘಾಡಿ ಕೂಡ ರಾಜ್ಯ ವಿಧಾನ ಸಭೆ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಲಿದೆ.

ಮಹಾ ವಿಕಾಸ ಅಘಾಡಿ ಅಧಿಕಾರಕ್ಕೆ ಬಂದರೆ, ರಾಜ್ಯದಲ್ಲಿ ಸರಕಾರದ ನೀತಿಯಡಿ ವಿದ್ಯಾರ್ಥಿನಿಯರು ಉಚಿತ ಶಿಕ್ಷಣ ಪಡೆಯುವಂತೆ ವಿದ್ಯಾರ್ಥಿಗಳು ಕೂಡ ಉಚಿತ ಶಿಕ್ಷಣ ಪಡೆಯಲು ನೀತಿ ರೂಪಿಸಲಾಗುವುದು ಎಂದು ಠಾಕ್ರೆ ಭರವಸೆ ನೀಡಿದ್ದಾರೆ.

ತ್ವರಿತ ನಗರೀಕರಣವನ್ನು ಗಮನದಲ್ಲಿರಿಸಿಕೊಂಡರೆ ಮಹಾರಾಷ್ಟ್ರ ಹಾಗೂ ಮುಂಬೈಗೆ ಕೂಡ ವಸತಿ ನೀತಿ ಬೇಕಾಗುತ್ತದೆ. ಆದುದರಿಂದ ನಗರ, ಅರೆ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಮಣ್ಣಿನ ಮಕ್ಕಳಿಗಾಗಿ ಕೈಗೆಟಕುವ ದರದಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದರು.

ಉದ್ಯೋಗ ಸೃಷ್ಟಿಸುವತ್ತ ಪಕ್ಷ ಕಾರ್ಯ ನಿರ್ವಹಿಸಲಿದೆ. ಪ್ರತಿ ಜಿಲ್ಲೆಗಳಲ್ಲಿ ಪ್ರತಿ ತಿಂಗಳು ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ಉದ್ಧವ್ ಠಾಕ್ರೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News