ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಯ ಜಾಮೀನು ಪ್ರಶ್ನಿಸಿದ ಅರ್ಜಿ ವಿಚಾರಣೆ; ಆರೋಪಿ, ಇತರರಿಗೆ ಸುಪ್ರೀಂ ನೋಟಿಸ್
ಹೊಸದಿಲ್ಲಿ: ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದ ಆರೋಪಿಗಳಲ್ಲೊಬ್ಬನಾದ ಮೋಹನ್ ನಾಯಕ್‌ನ ಜಾಮೀನು ರದ್ದುಗೊಳಿಸಬೇಕೆಂದು ಕೋರಿ ಗೌರಿ ಅವರ ಸಹೋದರಿ ಕವಿತಾ ಲಂಕೇಶ್ ಅವರು ಸಲ್ಲಿಸಿರುವ ಅಪೀಲಿನ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟಿನ ದ್ವಿಸದಸ್ಯರ ಪೀಠವು ಆರೋಪಿ ಮತ್ತು ಇತರರಿಗೆ ನೋಟಿಸ್ ಜಾರಿಗೊಳಿಸಿ ವಿಸ್ತೃತ ಪ್ರತಿಕ್ರಿಯೆಗಳನ್ನು ಕೋರಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸತೀಶ್ ಚಂದ್ರ ಶರ್ಮ ಅವರ ಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.
ಗೌರಿ ಹತ್ಯೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟಿನಿಂದ ಡಿಸೆಂಬರ್ 7, 2023ರಂದು ಜಾಮೀನು ಪಡೆದ ಆರೋಪಿಗಳಲ್ಲಿ ಮೋಹನ್ ನಾಯಕ್ ಮೊದಲನೆಯವನಾಗಿದ್ದ. ವಿಚಾರಣೆಯಲ್ಲಾಗುತ್ತಿರುವ ವಿಳಂಬದ ಕಾರಣ ನೀಡಿ ಆತನಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಮೇಲಾಗಿ ಆತನ ವಿರುದ್ಧ ದಾಖಲಿಸಲಾಗಿರುವ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆಯಡಿ ಜೀವಾವಧಿ ಅಥವಾ ಗಲ್ಲುಶಿಕ್ಷೆ ನೀಡಲಾಗುವುದಿಲ್ಲ ಎಂಬ ಕಾರಣವನ್ನೂ ನೀಡಿ ಆತನಿಗೆ ಜಾಮೀನನ್ನು ಹೈಕೋರ್ಟ್ ನೀಡಿತ್ತಲ್ಲದೆ ಆತ ಐದು ವರ್ಷಗಳಿಗೂ ಹೆಚ್ಚು ಕಾಲ ಕಸ್ಟಡಿಯಲ್ಲಿದ್ದ ಎಂಬ ಅಂಶವನ್ನೂ ಗಣನೆಗೆ ತೆಗೆದುಕೊಂಡಿತ್ತು.
ಗೌರಿ ಪ್ರಕರಣದಲ್ಲಿ ಒಟ್ಟು 17 ಆರೋಪಿಗಳಿದ್ದರೆ ನಾಯಕ್ ಈ ಪ್ರಕರಣದ 11ನೇ ಆರೋಪಿಯಾಗಿದ್ದು ಹತ್ಯೆಗೆ ಕ್ರಿಮಿನಲ್ ಸಂಚು ಹೂಡಿದನೆಂಬ ಆರೋಪ ಎದುರಿಸುತ್ತಿದ್ದಾನೆ.