ಜಿ.ಎನ್. ಸಾಯಿಬಾಬಾ ನಿಧನಕ್ಕೆ ಜರ್ಮನ್‌ನ ರಾಯಬಾರಿ ಸಂತಾಪ

Update: 2024-10-18 16:17 GMT

ಜಿ.ಎನ್. ಸಾಯಿಬಾಬಾ | PC : X 

ಮುಂಬೈ: ಮಾನವ ಹಕ್ಕುಗಳ ಹೋರಾಟಗಾರ ಜಿ.ಎನ್. ಸಾಯಿಬಾಬಾ ಅವರ ನಿಧನಕ್ಕೆ ಜರ್ಮನ್ ರಾಯಬಾರಿ ಡಾ. ಫಿಲಿಪ್ ಅಕರ್‌ಮನ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಜಿ.ಎನ್. ಸಾಯಿಬಾಬಾ ಅವರ ಪುತ್ರಿ ಮಂಜೀರಾ ಅವರಿಗೆ ಬರೆದ ಪತ್ರದಲ್ಲಿ ಅಕರ್‌ಮನ್, ‘‘ನಿಮ್ಮ ತಂದೆಯ ನಿಧನದ ಸುದ್ದಿ ಕೇಳಿ ಆಘಾತ ಹಾಗೂ ದುಃಖವಾಗಿದೆ. ನಿಮ್ಮ ದುಃಖದಲ್ಲಿ ನಾನು ಕೂಡ ಭಾಗಿಯಾಗಿದ್ದೇನೆ’’ ಎಂದಿದ್ದಾರೆ.

ಕಳೆದ ವರ್ಷ ಎಪ್ರಿಲ್‌ನಲ್ಲಿ ತನ್ನ ಫ್ರೆಂಚ್ ಸಹೋದ್ಯೋಗಿಯೊಂದಿಗೆ ಜಿ.ಎನ್. ಸಾಯಿಬಾಬಾ ಅವರನ್ನು ಭೇಟಿಯಾಗಿರುವುದನ್ನು ಅಕರ್‌ಮನ್ ನೆನಪಿಸಿಕೊಂಡಿದ್ದಾರೆ. ನಮ್ಮ ಭೇಟಿಯು ಅಲ್ಪಾವಧಿಯದ್ದಾಗಿದ್ದರೂ ಅವರು ನನ್ನ ಮೇಲೆ ಆಳವಾದ ಪ್ರಭಾವ ಬೀರಿದ್ದಾರೆ ಎಂದಿದ್ದಾರೆ.

‘‘ನಿಮ್ಮ ತಂದೆಯ ಜೀವನಗಾಥೆ. ಅವರ ಸುದೀರ್ಘ ಸೆರವಾಸ. ಭಾರತದಲ್ಲಿ ನಾಗರಿಕ ಹಕ್ಕುಗಳ ಬಗ್ಗೆ ಅವರ ಅಚಲ ಬದ್ಧತೆ ನನಗೆ ಅವರ ಮೇಲೆ ಗೌರವ ಮೂಡುವಂತೆ ಮಾಡಿದೆ’’ ಎಂದು ಅವರು ಹೇಳಿದ್ದಾರೆ.

‘‘ನಿಮ್ಮ ದುಃಖದ ಅರಿವು ನನಗಿದೆ. ನಿಮಗೆ, ನಿಮ್ಮ ಕುಟುಂಬಕ್ಕೆ ಹಾಗೂ ನಿಮ್ಮ ತಂದೆಯ ಸ್ನೇಹಿತರಿಗೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ’’ ಎಂದು ಅವರು ಹೇಳಿದ್ದಾರೆ.

ಈ ಪತ್ರದ ಪ್ರತಿಯನ್ನು ನ್ಯಾಯವಾದಿ ಪ್ರಶಾಂತ್ ಭೂಷಣ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದಕ್ಕೆ, ಜರ್ಮನ್‌ನ ರಾಯಬಾರಿ ಪ್ರೊ. ಸಾಯಿಬಾಬಾ ನಿಧನದ ಕುರಿತು ಅವರ ಪುತ್ರಿಗೆ ಬರೆದ ತುಂಬಾ ಔದಾರ್ಯಪೂರ್ಣ ಸಂತಾಪ ಪತ್ರ ಎಂದು ಶೀರ್ಷಿಕೆ ನೀಡಿದ್ದಾರೆ.

ಜಿ.ಎನ್. ಸಾಯಿಬಾಬಾ ಅವರು ಅಕ್ಟೋಬರ್ 12ರಂದು ನಿಧನರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News