ಉತ್ತರ ಪ್ರದೇಶ: ಟಿಕೆಟ್ ರಹಿತ ಪ್ರಯಾಣ ಮಾಡುತ್ತಿದ್ದ 400ಕ್ಕೂ ಹೆಚ್ಚು ಪೊಲೀಸರಿಗೆ ದಂಡ ವಿಧಿಸಿದ ರೈಲ್ವೆ
ಹೊಸದಿಲ್ಲಿ: ಗಾಝಿಯಾಬಾದ್-ಕಾನ್ಪುರ ಮಾರ್ಗದ ವಿವಿಧ ಸ್ಥಳಗಳಿಗೆ ಕಳೆದ ಒಂದೂವರೆ ತಿಂಗಳಿನಿಂದ ಟಿಕೆಟ್ ರಹಿತ ಪ್ರಯಾಣ ಮಾಡಿದ್ದ 400ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳಿಗೆ ಪ್ರಯಾಗ್ ರಾಜ್ ರೈಲ್ವೆ ವಲಯವು ದಂಡ ವಿಧಿಸಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವಿಶೇಷ ಅಭಿಯಾನವನ್ನು ಕೈಗೊಂಡಿದ್ದ ಸಂಚಾರಿ ಅಧಿಕಾರಿಗಳು, ಬಹುತೇಕ ಪೊಲೀಸ್ ಸಿಬ್ಬಂದಿ ಟಿಕೆಟ್ ರಹಿತವಾಗಿ ಹವಾನಿಯಂತ್ರಿತ ಬೋಗಿಗಳು ಹಾಗೂ ಪ್ಯಾಂಟ್ರಿ ಕಾರುಗಳಲ್ಲಿ ಪ್ರಯಾಣಿಸುವ ಮೂಲಕ ಪ್ರಯಾಣಿಕರಿಗೆ ಅನಾನುಕೂಲ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.
ಒಂದು ವೇಳೆ ನಮಗೇನಾದರೂ ದಂಡ ವಿಧಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತಿದ್ದ ಪೊಲೀಸ್ ಸಿಬ್ಬಂದಿಗಳು ಸಂಚಾರಿ ಅಧಿಕಾರಿಗಳು ಹಾಗೂ ಟಿಕೆಟ್ ಪರೀಕ್ಷಕರಿಗೆ ಬೆದರಿಕೆ ಒಡ್ಡಿದರು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಎನ್ಸಿಆರ್ ವಲಯದ ಭಾರತೀಯ ರೈಲ್ವೆ ಟಿಕೆಟ್ ಪರೀಕ್ಷಕ ಸಿಬ್ಬಂದಿ ಸಂಘಟನೆಯ ವಲಯ ಕಾರ್ಯದರ್ಶಿ ಸಂತೋಷ್ ಕುಮಾರ್ ಪ್ರಕಾರ, “ಆರಂಭದಲ್ಲಿ ಪೊಲೀಸ್ ಸಿಬ್ಬಂದಿಗಳು ವಾಣಿಜ್ಯ ಅಧಿಕಾರಿಗಳನ್ನು ಬೆದರಿಸಲು ನೋಡಿದರು. ಆದರೆ, ಧೃತಿಗೆಡದ ಅವರು, ಪೊಲೀಸ್ ಸಿಬ್ಬಂದಿಗಳ ಚಲನವಲನವನ್ನು ತಮ್ಮ ಫೋನ್ ನಲ್ಲಿ ಚಿತ್ರೀಕರಿಸಿಕೊಳ್ಳಲು ಪ್ರಾರಂಭಿಸಿದರು. ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತಿದ್ದ ಪೊಲೀಸ್ ಸಿಬ್ಬಂದಿಗಳಿಗೆ ನಿರ್ದಾಕ್ಷಿಣ್ಯವಾಗಿ ದಂಡದ ಚಲನ್ ನೀಡಿದ ಅವರು, ಪೊಲೀಸ್ ಸಿಬ್ಬಂದಿಗಳ ದುರ್ವರ್ತನೆಯ ಬಗ್ಗೆ ಪೊಲೀಸ್ ಇಲಾಖೆಗೆ ವರದಿಯನ್ನೂ ಮಾಡಿದರು. ನಂತರ ಅವರು ಕ್ಷಮೆಗಾಗಿ ಯಾಚಿಸತೊಡಗಿದರು” ಎಂದು ಹೇಳಿದ್ದಾರೆ.
“ದಂಡವನ್ನು ತಪ್ಪಿಸಿಕೊಳ್ಳಲು ಅವರ ಪೈಕಿ ಅನೇಕರು ಒಂದು ಬೋಗಿಯಿಂದ ಮತ್ತೊಂದು ಬೋಗಿಗೆ ಪರಾರಿಯಾದರು” ಎಂದು ಅವರು ತಿಳಿಸಿದ್ದಾರೆ.
ಅಧಿಕೃತ ಪ್ರಯಾಣಿಕರಿಗೆ ತೊಂದರೆಯಾಗದಿರಲು ಈ ತಪಾಸಣಾ ಅಭಿಯಾನವನ್ನು ಹಬ್ಬದ ಋತುವಿನಾದ್ಯಂತ ನಡೆಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
“ಹಬ್ಬದ ಋತುವಿನ ನಂತರ ಕೂಡಾ, ಇಂತಹ ಕೃತ್ಯಗಳನ್ನು ಮಟ್ಟ ಹಾಕಲು ಆಗಾಗ ದಿಢೀರ್ ತಪಾಸಣೆ ನಡೆಸಲಾಗುವುದು” ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ.