ಉತ್ತರ ಗಾಝಾಕ್ಕೆ ಹೆಚ್ಚುವರಿ ಪಡೆ ರವಾನಿಸಿದ ಇಸ್ರೇಲ್
ಜೆರುಸಲೇಂ: ಗಾಝಾದಲ್ಲಿರುವ ಎಂಟು ನಿರಾಶ್ರಿತರ ಶಿಬಿರಗಳಲ್ಲಿ ಅತೀ ದೊಡ್ಡ ಶಿಬಿರ ಪ್ರದೇಶವಾದ ಜಬಾಲಿಯಾದಲ್ಲಿ ಕಾರ್ಯಾಚರಿಸುತ್ತಿರುವ ತನ್ನ ಪಡೆಗಳಿಗೆ ಬೆಂಬಲವಾಗಿ ಮತ್ತೊಂದು ಸೇನಾ ತುಕಡಿಯನ್ನು ರವಾನಿಸಿರುವುದಾಗಿ ಇಸ್ರೇಲ್ ಮಿಲಿಟರಿ ಶುಕ್ರವಾರ ಹೇಳಿದೆ.
ಜಬಾಲಿಯಾದಲ್ಲಿ ಇಸ್ರೇಲ್ ಟ್ಯಾಂಕ್‍ಗಳು ರಸ್ತೆಗಳು ಮತ್ತು ಮನೆಗಳನ್ನು ಸ್ಫೋಟಿಸಿದ್ದು ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ವೈಮಾನಿಕ ಮತ್ತು ಭೂಮಿಯ ಕಾರ್ಯಾಚರಣೆಯನ್ನು ಇಸ್ರೇಲ್ ಏಕಕಾಲದಲ್ಲಿ ಮುಂದುವರಿಸಿದ್ದು ಶಿಬಿರದ ಹೃದಯ ಭಾಗಕ್ಕೆ ಇಸ್ರೇಲ್ ಟ್ಯಾಂಕ್ ನುಗ್ಗಿದೆ. ಹಲವು ಕಟ್ಟಡಗಳ ಒಳಗೆ ಸ್ಫೋಟಕಗಳನ್ನು ಇರಿಸಿ ದೂರನಿಯಂತ್ರಿತ ಸಾಧನದ ಮೂಲಕ ಸ್ಫೋಟಿಸುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ. ಮತ್ತಷ್ಟು ಆಕ್ರಮಣ ನಡೆಸಲು ಹಮಾಸ್ ಹೋರಾಟಗಾರರು ಮತ್ತೆ ಒಗ್ಗೂಡುವುದನ್ನು ತಡೆಯಲು ಜಬಾಲಿಯಾದಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದೆ.
ಉತ್ತರ ಗಾಝಾದ ಪಟ್ಟಣಗಳನ್ನು ಗಾಝಾ ನಗರದೊಂದಿಗೆ ಪ್ರತ್ಯೇಕವಾಗಿಸಲು ಇಸ್ರೇಲ್ ಪಡೆ ಯಶಸ್ವಿಯಾಗಿದ್ದು ಸ್ಥಳಾಂತರಗೊಳ್ಳುವಂತೆ ನೀಡಿದ ಆದೇಶವನ್ನು ಪಾಲಿಸುವ ಮತ್ತು ಉತ್ತರ ಗಾಝಾದ ಪಟ್ಟಣಗಳನ್ನು ತೊರೆಯುವ ಕುಟುಂಬಗಳನ್ನು ಹೊರತುಪಡಿಸಿ ಉಳಿದವರ ಚಲನೆಯನ್ನು ನಿರ್ಬಂಧಿಸಿದೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.