ಪ್ರಧಾನಿ ನರೇಂದ್ರ ಮೋದಿ ಅವರಿಂದ ಕಲಿಯುವುದು ಸಾಕಷ್ಟಿದೆ: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು
ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿಯವರನ್ನು ಅನುಸರಿಸಿ ಹಾಗೂ ಅವರ ಛಲ ಮತ್ತು ಕಠಿಣ ಪರಿಶ್ರಮದಿಂದ ಪಾಠ ಕಲಿಯಿರಿ ಎಂದು ತಮ್ಮ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಟಿಡಿಪಿ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಕರೆ ನೀಡಿದ್ದಾರೆ.
ಶುಕ್ರವಾರ ಮಂಗಳಗಿರಿಯಲ್ಲಿ ಆಯೋಜಿಸಲಾಗಿದ್ದ ಟಿಡಿಪಿ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಪಕ್ಷದ ಉಸ್ತುವಾರಿಗಳು ಹಾಗೂ ಹಿರಿಯ ನಾಯಕರ ಸಭೆಯನ್ನುದ್ದೇಶಿಸಿ ಮಾತನಾಡಿದ ನಾಯ್ಡು, “ಪ್ರಧಾನಿ ನರೇಂದ್ರ ಮೋದಿಯವರಿಂದ ಕಲಿಯುವುದು ಸಾಕಷ್ಟಿದೆ. ನಿರ್ದಿಷ್ಟವಾಗಿ ಅವರ ಛಲ ಮತ್ತು ಕಠಿಣ ಪರಿಶ್ರಿಮದಿಂದ. ಮೋದಿ ಸತತ ಮೂರನೆಯ ಬಾರಿಗೆ ಪ್ರಧಾನಿಯಾಗಿದ್ದರೂ, ಜನರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ಚುನಾವಣೆಯ ಕಡೆ ಗಮನ ಹರಿಸಿದ್ದಾರೆ ಮತ್ತು ಎಲ್ಲ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ” ಎಂದು ಶ್ಲಾಘಿಸಿದ್ದಾರೆ.
"ಮೋದಿಯವರ ಯಶಸ್ಸಿನ ಹಿಂದಿರುವ ಕಾರಣ ಅವರ ಕಠಿಣ ಪರಿಶ್ರಮ ಮತ್ತು ಶಿಸ್ತು. ಅವರು ಯಾವಾಗಲೂ ತಮ್ಮ ಪಕ್ಷದ ಯಾವ ನಾಯಕನೂ ತಪ್ಪು ಮಾಡದಂತೆ ಖಾತರಿಪಡಿಸುತ್ತಾರೆ” ಎಂದೂ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.