ನಿದ್ರಾಹೀನತೆಯಿಂದ ಬಳಲುತ್ತಿರುವ ಉದ್ಯಮಿಗಳು, ನವೋದ್ಯಮಗಳ ಸಂಸ್ಥಾಪಕರು: ಸಮೀಕ್ಷೆ ವರದಿ

Update: 2025-03-14 20:07 IST
ನಿದ್ರಾಹೀನತೆಯಿಂದ ಬಳಲುತ್ತಿರುವ ಉದ್ಯಮಿಗಳು, ನವೋದ್ಯಮಗಳ ಸಂಸ್ಥಾಪಕರು: ಸಮೀಕ್ಷೆ ವರದಿ

PC - freepik.com

  • whatsapp icon

ಹೈದರಾಬಾದ್: ಶೇ. 55ರಷ್ಟು ನವೋದ್ಯಮ ಸಂಸ್ಥಾಪಕರು ಹಾಗೂ ಉದ್ಯಮ ನಾಯಕರು ನಿದ್ರಾಹೀನತೆಯಿಂದ ಬಳಲುತ್ತಿರುವುದು ಲಾಭರಹಿತ TiE Global ಸಂಸ್ಥೆಯೊಂದಿಗೆ ಹೈದರಾಬಾದ್ ಮೂಲದ ಶ್ರೀ ರಾಮ್ ಚಂದ್ರ ಮಿಷನ್ ನಡೆಸಿರುವ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.

ಸಮೀಕ್ಷಾ ತಂಡವು ಭಾರತದ ಐದು ಪ್ರಮುಖ ನಗರಗಳಾದ ದಿಲ್ಲಿ, ಮುಂಬೈ, ಹೈದರಾಬಾದ್, ಬೆಂಗಳೂರು, ಚೆನ್ನೈ ಹಾಗೂ ಪುಣೆಯ 260 ಉದ್ಯಮಿಗಳ ಸಂದರ್ಶನ ನಡೆಸಿದ್ದು, ದೀರ್ಘಕಾಲೀನ ಕೆಲಸದ ಸಮಯ, ಅತಿಯಾದ ಒತ್ತಡದ ನಿರ್ಧಾರಗಳ ಕೈಗೊಳ್ಳುವಿಕೆ ಹಾಗೂ ಹಣಕಾಸು ಅನಿಶ್ಚಿತತೆಯಿಂದಾಗಿ ಈ ಉದ್ಯಮಿಗಳು ಅತಿಯಾದ ಒತ್ತಡ ಹಾಗೂ ಬೇಗುದಿಗೆ ಒಳಗಾಗುತ್ತಿರುವುದು ಕಂಡು ಬಂದಿದೆ. ಇದರಿಂದಾಗಿ, ಉತ್ಪಾದಕತೆ ಹಾಗೂ ಒಟ್ಟಾರೆ ಸ್ವಾಸ್ಥ್ಯದ ಮೇಲೂ ದುಷ್ಪರಿಣಾಮವುಂಟಾಗುತ್ತಿದೆ. ಈ ಸಮೀಕ್ಷೆಯಲ್ಲಿ 200ಕ್ಕೂ ಹೆಚ್ಚು ಉದ್ಯಮಿಗಳು ಹಾಗೂ ನವೋದ್ಯಮ ಸಂಸ್ಥಾಪಕರು ಹಾಗೂ 50ಕ್ಕೂ ಹೆಚ್ಚು ತಂತ್ರಜ್ಞಾನ ವೃತ್ತಿಪರರು ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ.

ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇ. 80ಕ್ಕಿಂತ ಹೆಚ್ಚು ಮಂದಿ ನಿದ್ರಾಹೀನತೆಯು ನಮ್ಮ ಉದ್ಯೋಗ ನಿರ್ವಹಣೆ, ಏಕಾಗ್ರತೆ ಹಾಗೂ ಕೆಲಸದ ಸ್ಥಳಗಳಲ್ಲಿನ ಸಂಬಂಧಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ.

ಆದರೆ, ಉದ್ಯಮಿಗಳ ಪಾಲಿಗೆ ನಿದ್ರಾಹೀನತೆಯಿಂದಾಗುತ್ತಿರುವ ದುಷ್ಪರಿಣಾಮ ಇನ್ನೂ ಗಂಭೀರವಾಗಿದ್ದು, ಉದ್ಯಮದ ಯಶಸ್ಸಿಗೆ ಅಗತ್ಯವಾಗಿರುವ ನಿರ್ಧಾರ ಕೈಗೊಳ್ಳುವಿಕೆ, ಕ್ರಿಯಾಶೀಲತೆ ಹಾಗೂ ಸ್ಥಿತಿ ಸ್ಥಾಪಕತ್ವದಂತಹ ಮಹತ್ವದ ವ್ಯಾವಹಾರಿಕ ಕಾರ್ಯನಿರ್ವಹಣೆಯನ್ನು ಅಸ್ತವ್ಯಸ್ತಗೊಳಿಸುತ್ತಿದೆ ಎಂದು ಹೇಳಲಾಗಿದೆ.

ಹಲವಾರು ಉದ್ಯಮಿಗಳು ನಮಗೆ ಪದೇ ಪದೇ ನಿದ್ರಾ ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದು, ಈ ಪೈಕಿ ಶೇ. 19ರಷ್ಟು ಉದ್ಯಮಿಗಳು ತಮ್ಮ ನಿದ್ರೆಯ ಗುಣಮಟ್ಟವನ್ನು ‘ಕಳಪೆ’ ಅಥವಾ ‘ಅತಿ ಕಳಪೆ’ ಎಂದು ಹೇಳಿಕೊಂಡಿದ್ದಾರೆ. ಇದರೊಂದಿಗೆ, ಶೇ. 26ರಷ್ಟು ವೃತ್ತಿಪರರು ತಮಗೆ ರಾತ್ರಿ ಹೊತ್ತು ನಿದ್ರೆ ಮಾಡಲು ಆರು ಗಂಟೆಗಿಂತ ಕಡಿಮೆ ಅವಧಿ ದೊರೆಯುತ್ತಿದೆ ಎಂದು ಹೇಳಿಕೊಂಡಿದ್ದರೆ, ಉದ್ಯಮಿಗಳ ಪರಿಸ್ಥಿತಿ ಅದಕ್ಕಿಂತ ಕೆಟ್ಟದಾಗಿದೆ ಎಂಬುದರತ್ತ ವರದಿಯಲ್ಲಿ ಬೊಟ್ಟು ಮಾಡಲಾಗಿದೆ.

ನಿದ್ರಾ ಸಮಸ್ಯೆಗಳಿಗೆ ಒತ್ತಡ ಹಾಗೂ ಗಾಬರಿಯನ್ನು ಪ್ರಮುಖ ಕಾರಣಗಳೆಂದು ಗುರುತಿಸಲಾಗಿದ್ದು, ಇವು ರಾತ್ರಿ ಮಲಗುವುದಕ್ಕೂ ಮುನ್ನ, ಕಂಪ್ಯೂಟರ್ ವೀಕ್ಷಿಸುವುದರಿಂದ ಆಗುತ್ತಿರುವ ದುಷ್ಪರಿಣಾಮಗಳಿಗಿಂತ ಗಂಭೀರ ಸ್ವರೂಪದ್ದಾಗಿವೆ ಎಂದು ಹೇಳಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಶ್ರೀ ರಾಮ್ ಚಂದ್ರ ಮಿಷನ್ ನ ಅಧ್ಯಕ್ಷ ದಾಜಿ, “ನಿದ್ರೆ ಕೇವಲ ವಿಶ್ರಾಂತಿ ಮಾತ್ರವಲ್ಲ; ಪವಿತ್ರ ಪ್ರಯಾಣ ಕೂಡಾ. ಮನಸ್ಸು, ದೇಹ ಹಾಗೂ ಆತ್ಮ ಪುನಶ್ಚೇತನಗೊಳ್ಳಲು ಇರುವ ಒಂದು ಅವಕಾಶ. ನಿದ್ರೆಯ ಸಮಯದಲ್ಲಿ ಮಾತ್ರ ಅಹಂಕಾರದ ಹೊರೆಗಳು ಸಡಿಲಗೊಂಡು, ನಾವು ಆಳವಾದ ಪ್ರಜ್ಞೆಯೊಂದಿಗೆ ಬೆರೆಯಲು ಅವಕಾಶ ದೊರೆಯುತ್ತದೆ” ಎನ್ನುತ್ತಾರೆ.

“ಆರೋಗ್ಯಕರ ನಿದ್ರಾಭ್ಯಾಸಗಳನ್ನು ರೂಢಿಸಿಕೊಂಡಿರುವ ಉದ್ಯಮಿಗಳು ಮಹತ್ತರವಾದ ಬದಲಾವಣೆಗಳನ್ನು ಕಾಣುತ್ತಾರೆ. ಅದು ಕೇವಲ ಆರೋಗ್ಯವಂತಿಕೆಯಲ್ಲಿ ಮಾತ್ರವಲ್ಲ; ಉದ್ಯಮಗಳನ್ನು ವಿವೇಕ, ಕ್ರಿಯಾಶೀಲತೆ ಹಾಗೂ ಸಮತೋಲಿತವಾಗಿ ಮುನ್ನಡೆಸುವ ಸಾಮರ್ಥ್ಯದಲ್ಲೂ ಕೂಡಾ. ಆಳವಾದ ವಿಶ್ರಾಂತಿಯ ಹೊತ್ತಿನಲ್ಲಿ ಅಂತಃಪ್ರಜ್ಞೆ ಬಲಿಷ್ಠಗೊಳ್ಳುತ್ತದೆ. ಸ್ಪಷ್ಟತೆ ಮೂಡುತ್ತದೆ ಹಾಗೂ ಅದ್ಭುತ ಸಾಧ್ಯತೆಗಳಿಗೆ ಮನಸ್ಸು ಎಚ್ಚರವಾಗಿರುತ್ತದೆ” ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News