ಕೇಂದ್ರ ಸರಕಾರ, ರೈತರ ನಡುವಿನ ಮಾತುಕತೆ ಅಪೂರ್ಣ; ಫೆ. 22ರಂದು ಮುಂದಿನ ಸಭೆ

ಸಾಂದರ್ಭಿಕ ಚಿತ್ರ | PC : PTI
ಚಂಡಿಗಢ: ಬೆಳೆಗಳ ಮೇಲಿನ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಲು ಚಂಡಿಗಢದಲ್ಲಿ ಶುಕ್ರವಾರ ನಡೆದ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ನೇತೃತ್ವದ ಕೇಂದ್ರದ ತಂಡ ಹಾಗೂ ರೈತ ಪ್ರತಿನಿಧಿಗಳ ನಡುವಿನ ಬಹುನಿರೀಕ್ಷಿತ ಸಭೆ ಯಾವುದೇ ತೀರ್ಮಾನ ತೆಗೆದುಕೊಳ್ಳದೆ ಅಂತ್ಯಗೊಂಡಿತು.
ಫೆ. 22ರಂದು ಮತ್ತೆ ಸಭೆ ಸೇರಲು ಕೇಂದ್ರದ ತಂಡ ಹಾಗೂ ರೈತ ಪ್ರತಿನಿಧಿಗಳು ಒಪ್ಪಿಕೊಂಡರು.
ಇದು ಕೇಂದ್ರ ಸರಕಾರ ಹಾಗೂ 28 ರೈತ ನಾಯಕರ ನಡುವಿನ ಐದನೇ ಸುತ್ತಿನ ಸಭೆ. ಅಲ್ಲದೆ, ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಮೂರನೆ ಅವಧಿಯಲ್ಲಿ ನಡೆಯುತ್ತಿರುವ ಮೊದಲ ಸಭೆ. ಪಂಜಾಬ್ ಹಾಗೂ ಹರ್ಯಾಣದ ನಡುವಿನ ಶಂಭು ಹಾಗೂ ಖನೌರಿ ಗಡಿ ಕೇಂದ್ರದಲ್ಲಿ 2024 ಫೆಬ್ರವರಿಯಲ್ಲಿ ಪ್ರತಿಭಟನೆ ಆರಂಭವಾದ ಒಂದು ವರ್ಷದ ಬಳಿಕ ಈ ಸಭೆ ನಡೆದಿದೆ.
ಹಿಂದಿನ ಸಭೆಗಳು ಕಳೆದ ವರ್ಷ ಫೆಬ್ರವರಿ 8, 12 15 ಹಾಗೂ 18ರಂದು ನಡೆದಿತ್ತು. ಆ ಸಭೆಗಳಲ್ಲಿ ಕೂಡ ಯಾವುದೇ ತೀರ್ಮಾನ ತೆಗೆದುಕೊಂಡಿರಲಿಲ್ಲ.
ಮೂರು ಗಂಟೆಯ ಸುದೀರ್ಘ ಸಭೆಯ ಬಳಿಕ ಜೋಷಿ ಅವರು, ಆತ್ಮ ನಿರ್ಭರ ಕಾರ್ಯಕ್ರಮದ ಅಡಿಯಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಮೂರು ದ್ವಿದಳ ಧಾನ್ಯಗಳನ್ನು ಖರೀದಿಸುವ ಬಗ್ಗೆ ಅನುದಾನ ಮೀಸಲಿಡಲಾಗಿದೆ ಎಂದರು.
ಉಪವಾಸ ಮುಷ್ಕರವನ್ನು ಅಂತ್ಯಗೊಳಿಸುವಂತೆ ನಾವು ರೈತ ನಾಯಕ ಜಗಜೀತ್ ಸಿಂಗ್ ಡಲ್ಲೇವಾಲ್ ಅವರಲ್ಲಿ ಮನವಿ ಮಾಡಿದ್ದೇವೆ ಎಂದು ಅವರು ತಿಳಿಸಿದರು.