2022ರಲ್ಲಿ ಕೌಟುಂಬಿಕ ಹಿಂಸೆ, ವರದಕ್ಷಿಣೆ ಬೇಡಿಕೆ ಸೇರಿದಂತೆ ಸರಕಾರದ ಎನ್ನಾರೈ ಕೋಶಕ್ಕೆ 400ಕ್ಕೂ ಅಧಿಕ ದೂರುಗಳು

Update: 2024-09-29 14:34 GMT

ಸಾಂದರ್ಭಿಕ ಚಿತ್ರ | PC : PTI 

ಹೊಸದಿಲ್ಲಿ : ಸರಕಾರದ ಎನ್ನಾರೈ ಕೋಶವು 2022ರಲ್ಲಿ ಮಹಿಳೆಯರಿಂದ 400ಕ್ಕೂ ಅಧಿಕ ದೂರುಗಳನ್ನು ಸ್ವೀಕರಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಇತ್ತೀಚಿನ ವಾರ್ಷಿಕ ವರದಿಯಂತೆ ಕೌಟುಂಬಿಕ ಹಿಂಸೆ, ಪಾಸ್‌ಪೋರ್ಟ್‌ಗಳ ಕಿತ್ತುಕೊಳ್ಳುವಿಕೆ, ಪತಿಯಿಂದ ತೊರೆಯುವಿಕೆ, ವರದಕ್ಷಿಣೆ ಬೇಡಿಕೆ ಮತ್ತು ಮಕ್ಕಳ ಪಾಲನೆ ವಿವಾದ ಇತ್ಯಾದಿಗಳಿಗೆ ಈ ದೂರುಗಳು ಸಂಬಂಧಿಸಿವೆ.

ಎನ್ನಾರೈಗಳ ಜೊತೆಗೆ ಭಾರತ ಮತ್ತು ವಿದೇಶಗಳಲ್ಲಿನ ಮಹಿಳೆಯರ ವಿವಾಹಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಎನ್ನಾರೈ ಕೋಶವು ನಿರ್ವಹಿಸುತ್ತದೆ. ಅನೇಕ ಮಹಿಳೆಯರು ಗಂಡನ ಮನೆಯವರು ತಮ್ಮ ಪಾಸ್‌ಪೋರ್ಟ್‌ಗಳನ್ನು ಕಿತ್ತುಕೊಂಡಿದ್ದಾರೆ ಮತ್ತು ವಿದೇಶದಲ್ಲಿರುವ ತಮ್ಮ ಗಂಡಂದಿರು ಸಂಪೂರ್ಣವಾಗಿ ಸಂಪರ್ಕ ಕಳೆದುಕೊಂಡಿರುವುದರಿಂದ ಅಥವಾ ಅವರು ಎಲ್ಲಿದ್ದಾರೆ ಎನ್ನುವುದು ಗೊತ್ತಾಗದೇ ಅವರನ್ನು ಸೇರಿಕೊಳ್ಳಲು ತಮಗೆ ಸಾಧ್ಯವಾಗುತ್ತಿಲ್ಲ ಎಂಬ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಎನ್ನಾರೈ ವಿವಾಹಗಳ ಸಂಕೀರ್ಣತೆಯು ಹೆಚ್ಚಾಗಿ ಕಾನೂನು ಮತ್ತು ಹಣಕಾಸು ನೆರವು,ಮಕ್ಕಳ ಪಾಲನೆ ಸಮಸ್ಯೆಗಳು ಮತ್ತು ಗಂಡಂದಿರ ಅಜ್ಞಾತ ವಾಸಸ್ಥಳಗಳು ಸೇರಿದಂತೆ ಗಮನಾರ್ಹ ಸವಾಲುಗಳನ್ನು ಒಳಗೊಂಡಿರುತ್ತದೆ ಎಂದು ಹೇಳಿರುವ ವರದಿಯು, ಈ ಪ್ರಕರಣಗಳನ್ನು ಬಗೆಹರಿಸಲು ಸರಕಾರದ ಇಲಾಖೆಗಳ ನಡುವೆ ಸಹಯೋಗಕ್ಕೆ ಆಗ್ರಹಿಸಿದೆ.

2022ರಲ್ಲಿ ಎನ್ನಾರೈ ಕೋಶವು ಮಹಿಳೆಯರಿಂದ ಒಟ್ಟು 481 ದೂರುಗಳನ್ನು ಸ್ವೀಕರಿಸಿದೆ ಎಂದು ವರದಿಯು ತಿಳಿಸಿದೆ.

ರಾಷ್ಟ್ರೀಯ ಮಹಿಳಾ ಆಯೋಗವು ಸಮಸ್ಯೆಗಳನ್ನು ಬಗೆಹರಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ,ಗೃಹ ವ್ಯವಹಾರಗಳು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳೊಂದಿಗೆ ಕೈಜೋಡಿಸಿದೆ. 2022ರಲ್ಲಿ ಆಯೋಗವು ಎನ್ನಾರೈಗಳನ್ನು ಒಳಗೊಂಡ ವೈವಾಹಿಕ ವಿವಾದಗಳ ಪರಿಹಾರವನ್ನು ಚುರುಕುಗೊಳಿಸಲು ಸಂಬಂಧಿತ ಅಧಿಕಾರಿಗಳಿಗೆ ಸುಮಾರು 3,500 ಪತ್ರಗಳನ್ನು ಬರೆದಿತ್ತು.

ಆಯೋಗವು ಅಧಿಕಾರಶಾಹಿ ಪ್ರಯತ್ನಗಳನ್ನು ಮೀರಿ ದೂರುದಾರರಿಗೆ ಮಾನಸಿಕ-ಸಾಮಾಜಿಕ ಹಾಗೂ ಕಾನೂನು ಸಮಾಲೋಚನೆಗಳನ್ನು ಒದಗಿಸಿದೆ. ಆಯೋಗವು 2022ರಲ್ಲಿ ನಿಯಮಿತ ದೂರವಾಣಿ ಸಮಾಲೋಚನೆಗಳ ಜೊತೆಗೆ ಸುಮಾರು 45 ವಾಕ್-ಇನ್ ದೂರುಗಳನ್ನು ನಿರ್ವಹಿಸಿದೆ. ಅಧಿಕಾರಿಗಳೊಂದಿಗೆ ಅನುಸರಣೆಗೆ ಅನುಕೂಲ ಕಲ್ಪಿಸಲು ಅಥವಾ ಗಂಡ-ಹೆಂಡತಿ ನಡುವೆ ಮರುಹೊಂದಾಣಿಕೆ ಪ್ರಯತ್ನಗಳಿಗಾಗಿ ಮಧ್ಯಸ್ಥಿಕೆ ವಹಿಸಲು ಸುಮಾರು 20 ಪ್ರಕರಣಗಳಲ್ಲಿ ವಿಚಾರಣೆಯನ್ನು ನಡೆಸಿದೆ ಎಂದು ವರದಿಯು ತಿಳಿಸಿದೆ.

ಎನ್ನಾರೈ ವಿವಾಹಗಳಲ್ಲಿ ಹಿಂಸೆ ಅಥವಾ ವಿವಾದಗಳನ್ನು ಎದುರಿಸುತ್ತಿರುವ ಮಹಿಳೆಯರಿಗೆ ಹೆಚ್ಚಿನ ಬೆಂಬಲವನ್ನು ಒದಗಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಪ್ರಸ್ತುತ ಯೋಜನೆಗಳ ಮಾದರಿಯಲ್ಲಿ ವಿದೇಶಗಳಲಿಯ ಭಾರತೀಯ ರಾಜತಾಂತ್ರಿಕ ಮಿಷನ್(ಐಡಿಎಂ)ಗಳಲ್ಲಿ ಒನ್ ಸ್ಟಾಪ್ ಸೆಂಟರ್‌ಗಳು ಮತ್ತು ಮೀಸಲು ಸಹಾಯವಾಣಿಗಳನ್ನು ಸ್ಥಾಪಿಸಲು ಯೊಜನೆಗಳನ್ನು ವರದಿಯು ವಿವರಿಸಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಯುಎಇ, ಬೆಹರೀನ್, ಖತರ್, ಓಮನ್, ಕುವೈಟ್, ಸೌದಿ ಅರೇಬಿಯ, ಸಿಂಗಾಪುರ ಮತ್ತು ಕೆನಡಾ ಸೇರಿದಂತೆ ಒಂಭತ್ತು ದೇಶಗಳಲ್ಲಿ 10 ಐಡಿಎಮ್‌ಗಳನ್ನು ಗುರುತಿಸಿದೆ. ಈ ದೇಶಗಳಲ್ಲಿ ವಾಸವಿರುವ ಭಾರತೀಯ ಮಹಿಳೆಯರ ಸಂಖ್ಯೆಯ ಆಧಾರದಲ್ಲಿ ಇವು ಅಗತ್ಯವೆಂದು ಪರಿಗಣಿಸಲಾಗಿದೆ. ಆದರೆ ಆಸ್ಟ್ರೇಲಿಯಾದಲ್ಲಿ ಐಡಿಎಂ ಸ್ಥಾಪಿಸುವ ಪ್ರಸ್ತಾವವಿತ್ತಾದರೂ ಅದನ್ನು ನಂತರ ಕೈಬಿಡಲಾಗಿದೆ.

ಎನ್‌ಆರ್‌ಐ ವೈವಾಹಿಕ ವಿವಾದಗಳು ಹೆಚ್ಚಾಗಿ ಗಂಡನಿಂದ ಪರಿತ್ಯಕ್ತತೆ, ಹಿಂಸೆ ಮತ್ತು ಗಡಿಯಾಚೆಯ ನಿಯಮಗಳಿಂದಾಗಿ ಸಂಕೀರ್ಣ ಕಾನೂನು ಸಮಸ್ಯೆಗಳನ್ನು ಒಳಗೊಂಡಿರುತ್ತವೆ. ಈ ಸವಾಲುಗಳನ್ನು ಎದುರಿಸಲು ಪಂಜಾಬ್ ಎನ್ನಾರೈ ಆಯೋಗದ ಮಾಜಿ ಅಧ್ಯಕ್ಷ ನ್ಯಾ.ಅರವಿಂದಕುಮಾರ ಗೋಯೆಲ್ ನೇತೃತ್ವದಲ್ಲಿ ತಜ್ಞರ ಸಮಿತಿಯೊಂದನ್ನು ಸರಕಾರವು ರಚಿಸಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು. ಸಮಿತಿಯು ತನ್ನ ವರದಿಯಲ್ಲಿ ಎನ್ನಾರೈ ವಿವಾಹಗಳಲ್ಲಿ ಮಹಿಳೆಯರಿಗೆ ನ್ಯಾಯ ಲಭ್ಯತೆಯನ್ನು ಹೆಚ್ಚಿಸಲು ಹಲವಾರು ಶಿಫಾರಸುಗಳನ್ನು ಮಾಡಿದೆ.

ಸಮಿತಿಯ ಶಿಫಾರಸುಗಳನ್ನು ಆಧರಿಸಿ ಎನ್ನಾರೈ ವೈವಾಹಿಕ ವಿವಾದಗಳನ್ನು ನಿರ್ವಹಿಸಲು ಸಂಬಂಧಿತ ಸಚಿವಾಲಯಗಳ ಹಿರಿಯ ಅಧಿಕಾರಿಗಳನ್ನೊಳಗೊಂಡ ಸಮಗ್ರ ನೋಡಲ್ ಏಜೆನ್ಸಿಯನ್ನು ಸ್ಥಾಪಿಸಲಾಗಿದೆ ಎಂದೂ ಅಧಿಕಾರಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News