ತಾಯ್ನಾಡಿಗೆ ಮರಳಿದ ಭಾರತದ ಪ್ರಪ್ರಥಮ ನಾಗರಿಕ ಗಗನಯಾನಿ ಗೋಪಿಚಂದ್‌ಗೆ ಭವ್ಯಸ್ವಾಗತ
ಹೊಸದಿಲ್ಲಿ : ಭಾರತದ ಪ್ರಪ್ರಥಮ ನಾಗರಿಕ ಬಾಹ್ಯಾಕಾಶ ಪ್ರಯಾಣಿಕ ಗೋಪಿಚಂದ್ ಥೋಟಕೂರ ಸೋಮವಾರ ಹೊಸದಿಲ್ಲಿಗೆ ಆಗಮಿಸಿದ್ದು, ಅವರಿಗೆ ಭವ್ಯ ಸ್ವಾಗತವನ್ನು ನೀಡಲಾಯಿತು.
ಅಮೆಝಾನ್ ಸಂಸ್ಥೆಯ ಸಂಸ್ಥಾಪಕ ಜೆಫ್ ಬೆರೊಸ್ ಅವರ ಬಾಹ್ಯಾಕಾಶ ಕಂಪೆನಿ ‘ಬ್ಲೂ ಓರಿಜಿನ್’ ಉಡಾವಣೆಗೊಳಿಸಿದ್ದ ನ್ಯೂ ಶೆಫರ್ಡ್-25 (ಎನ್‌ಎಸ್-25) ನೌಕೆಯ ಗಗನಯಾನಿ ಸಿಬ್ಬಂದಿಗಳಲ್ಲೊಬ್ಬರಾಗಿ ಅವರು ಅಂತರಿಕ್ಷಕ್ಕೆ ಮೇ 19ರಂದು ಪ್ರಯಾಣಿಸಿದ್ದರು.
‘‘ತಾಯ್ನಾಡಿಗೆ ಮರಳಿರುವುದು ನನಗೆ ಸಂತಸ ತಂದಿದೆ. ಭಾರತದ ಪಾಲಿಗೂ ಇದೊಂದು ಹೆಮ್ಮೆಯ ಕ್ಷಣವಾಗಿದೆ. ದೇಶವನ್ನು ಪ್ರತಿನಿಧಿಸಿರುವುದು ನನಗೆ ಸಂದ ಗೌರವವಾಗಿದೆ ’’ಎಂದು ಹೇಳಿದರು. ಆನಂತರ ಅವರು ಆಂಧ್ರಪ್ರದೇಶದ ವಿಜಯವಾಡದಲ್ಲಿರುವ ತನ್ನ ಹೆತ್ತವರನ್ನು ಭೇಟಿಯಾಗಲು ತೆರಳಿದರು.
ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಎರಡನೇ ಭಾರತೀಯರೆಂಬ ಹೆಗ್ಗಳಿಕೆಗೆ ಗೋಪಿಚಂದ್ ಥೋಟಕರ ಪಾತ್ರರಾಗಿದ್ದಾರೆ. ಭಾರತೀಯ ವಾಯುಪಡೆಯ ಮಾಜಿ ಪೈಲಟ್, ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರು 1984ರಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಪ್ರಪ್ರಥಮ ಭಾರತೀಯ ಪ್ರಜೆಯಾಗಿದ್ದಾರೆ.