ಶಾಲೆಯಲ್ಲಿ ಕಿರುಕುಳ ನೀಡಲಾಗುತ್ತಿದೆ, ಶಿಕ್ಷಕರು ಬೋಧಿಸುವುದಿಲ್ಲ ಎಂದು ಪತ್ರ ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ

Update: 2023-09-10 07:09 GMT

ಗುರ್ಗಾಂವ್: ತಾನು ವಾಸಿಸುತ್ತಿದ್ದ ವಿದ್ಯಾರ್ಥಿ ನಿಲಯದ ಮೂರನೆಯ ಮಹಡಿಯಿಂದ ಜಿಗಿದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ರೇವರಿಯಲ್ಲಿರುವ ವಸತಿ ಶಾಲೆಯೊಂದರಲ್ಲಿ ನಡೆದಿದೆ. ಈ ಕುರಿತು ಪತ್ರ ಬರೆದಿಟ್ಟಿರುವ ಆತ, ಶಾಲಾ ಪ್ರಾಧಿಕಾರವು ನನಗೆ ಕಿರುಕುಳ ನೀಡುತ್ತಿತ್ತು ಎಂದು ಆರೋಪಿಸಿದ್ದಾನೆ ಎಂದು timesofindia ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮಹೇಂದರ್ ಗಢ್ ನಿವಾಸಿಯಾದ 16 ವರ್ಷದ ಆ ಬಾಲಕನ ಕೋಣೆಯಲ್ಲಿ ಪತ್ತೆಯಾಗಿರುವ ಪತ್ರದಲ್ಲಿ ಶಾಲಾ ಪರಿಸರದ ಬಗ್ಗೆ ದೂರಿರುವ ಆತ, ಶಿಕ್ಷಕರು ಬೋಧಿಸುತ್ತಿಲ್ಲ ಮತ್ತು ಎಲ್ಲರೂ ಅಕ್ರಮವಾಗಿ ಹಣ ಸಂಪಾದಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದ್ದಾನೆ. ನನ್ನನ್ನು ಶಾಲೆಯಿಂದ ವರ್ಗಾಯಿಸಬೇಕು ಎಂದು ಪದೇ ಪದೇ ಮನವಿ ಮಾಡಿದರೂ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ ಎಂದೂ ಆತ ಅಳಲು ತೋಡಿಕೊಂಡಿದ್ದಾನೆ.

“ನನಗೆ ಶಾಲೆಯಲ್ಲಿ ಕಿರುಕುಳ ನೀಡಲಾಗುತ್ತಿದೆ. ಶಾಲೆಯ ಪರಿಸರ ಉತ್ತಮವಾಗಿಲ್ಲ. ಶಿಕ್ಷಕರು ಬೋಧಿಸುವುದಿಲ್ಲ. ಎಲ್ಲರೂ ಅಕ್ರಮವಾಗಿ ಹಣ ಸಂಪಾದಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಎಲ್ಲರಿಗೂ ಅಧಿಕಾರಿಯಾಗುವ ಅವಕಾಶ ಇಲ್ಲಿ ಇಲ್ಲ. ನಾನು ಎಲ್ಲರಿಗೂ ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗುವಂತೆ ಮನವಿ ಮಾಡಿದೆನಾದರೂ, ಯಾವುದೇ ಪ್ರಯೋಜನವಾಗಲಿಲ್ಲ. ನನ್ನ ಗೆಳೆಯರೂ ಸಹ ನನಗೆ ವಂಚಿಸಿದರು. ನಾನು ಇದರಿಂದ ಬೇಸತ್ತು ಹೋಗಿದ್ದು, ಮತ್ತಷ್ಟು ತಡೆದುಕೊಳ್ಳಲಾರೆ” ಎಂದು ಆ ಬಾಲಕನು ಪತ್ರದಲ್ಲಿ ಬರೆದಿದ್ದಾನೆ.

ಕಳೆದ ವರ್ಷ ಕೂಡಾ ಫರಿದಾಬಾದ್ ನಲ್ಲಿ ನಡೆದ ಇಂತಹುದೇ ದುರಂತದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ 10ನೇ ತರಗತಿಯ ವಿದ್ಯಾರ್ಥಿಯು, “ಈ ಶಾಲೆ ನನ್ನನ್ನು ಕೊಂದಿತು” ಎಂದು ತನ್ನ ತಾಯಿಗೆ ಪತ್ರ ಬರೆದಿದ್ದನು. ತಾನು ತನ್ನ ಕೆಲವು ಸಹಪಾಠಿಗಳಿಂದ ಎದುರಿಸಿದ ಲೈಂಗಿಕ ದೌರ್ಜನ್ಯಗಳಿಂದ ನನ್ನನ್ನು ರಕ್ಷಿಸಲು ಶಾಲಾ ಪ್ರಾಧಿಕಾರಗಳು ವಿಫಲವಾದವು ಎಂದು ಆತ ತನ್ನ ಪತ್ರದಲ್ಲಿ ಆರೋಪಿಸಿದ್ದನು.

ತಮ್ಮ ಪುತ್ರನ ಆತ್ಮಹತ್ಯೆ ಪ್ರಕರಣದ ಕುರಿತು ಕುಂದ್ ಪೊಲೀಸ್ ಹೊರ ಠಾಣೆಯಲ್ಲಿ ಆತನ ಕುಟುಂಬದ ಸದಸ್ಯರು ದೂರು ದಾಖಲಿಸಿದ ನಂತರ, ಶಾಲೆಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆಯ ಸಂಬಂಧ ದಿಲ್ಲಿಯಲ್ಲಿರುವ ಶಾಲಾ ಆಡಳಿತ ಮಂಡಳಿಯೂ ಆಂತರಿಕ ತನಿಖೆ ಕೈಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News