ಹರ್ಯಾಣ ಫಲಿತಾಂಶವನ್ನು ಒಪ್ಪಿಕೊಳ್ಳವುದಿಲ್ಲ ; ಮತಯಂತ್ರಗಳು, ಪ್ರಕ್ರಿಯೆಯನ್ನು ತಿರುಚಲಾಗಿದೆ : ಕಾಂಗ್ರೆಸ್
ಹೊಸದಿಲ್ಲಿ : ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾಗಿರುವ ಇಲೆಕ್ಟ್ರಾನಿಕ್ ಮತಯಂತ್ರಗಳನ್ನು ತಿರುಚಲಾಗಿದೆ ಎಂದು ಮಂಗಳವಾರ ಆರೋಪಿಸಿರುವ ಕಾಂಗ್ರೆಸ್ ಪಕ್ಷವು, ಈ ಚುನಾವಣಾ ಫಲಿತಾಂಶವನ್ನು ತಾನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದೆ. ಬಿಜೆಪಿಯು ಜನರ ತೀರ್ಪನ್ನು ಬುಡಮೇಲುಗೊಳಿಸಿದೆ ಎಂದು ಅದು ಆರೋಪಿಸಿದೆ.
‘‘ಮಧ್ಯಾಹ್ನವಿಡೀ ನಾನು ಚುನಾವಣಾ ಆಯೋಗದೊಂದಿಗೆ ಸಂಪರ್ಕದಲ್ಲಿದ್ದೆ. ನನ್ನ ದೂರಿಗೆ ಚುನಾವಣಾ ಆಯೋಗವು ಉತ್ತರಿಸಿದೆ. ಆ ಉತ್ತರಕ್ಕೆ ನಾನು ಪ್ರತಿಕ್ರಿಯಿಸಿದ್ದೇನೆ. ಕನಿಷ್ಠ ಮೂರು ಜಿಲ್ಲೆಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಮತ್ತು ಇಲೆಕ್ಟ್ರಾನಿಕ್ ಮತಯಂತ್ರಗಳ ಕಾರ್ಯವೈಖರಿ ಬಗ್ಗೆ ನಮಗೆ ಅತ್ಯಂತ ಗಂಭೀರ ದೂರುಗಳು ಬಂದಿವೆ. ನಾವು ಹರ್ಯಾಣದಲ್ಲಿರುವ ನಮ್ಮ ಹಿರಿಯ ಸಹೋದ್ಯೋಗಿಗಳೊಂದಿಗೆ ಮಾತನಾಡಿದ್ದೇವೆ. ಈ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ ಮತ್ತು ಇವುಗಳನ್ನು ನಾವು ಕ್ರೋಢೀಕರಿಸಿ ಚುನಾವಣಾ ಆಯೋಗಕ್ಕೆ ಸಲ್ಲಿಸುವ ಉದ್ದೇಶವನ್ನು ಹೊಂದಿದ್ದೇವೆ’’ ಎಂದು ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದರು.
ಹರ್ಯಾಣದ ಫಲಿತಾಂಶವು ಸಂಪೂರ್ಣ ಅನಿರೀಕ್ಷಿತವಾಗಿದೆ, ಅಚ್ಚರಿಯಿಂದ ಕೂಡಿದೆ ಮತ್ತು ಸಾಮಾನ್ಯ ತಿಳುವಳಿಕೆಗೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ನಾಯಕ ನುಡಿದರು.
‘‘ಇದು ಜನರ ಇಚ್ಛೆಯ ಬುಡಮೇಲು ಮತ್ತು ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಬುಡಮೇಲಿನ ವಿಜಯವಾಗಿದೆ’’ ಎಂದು ಅವರು ಬಣ್ಣಿಸಿದರು.
ಮಂಗಳವಾರ ಮತ ಎಣಿಕೆ ಆರಂಭಗೊಂಡಾಗ, ಆರಂಭಿಕ ಸುತ್ತುಗಳಲ್ಲಿ ಕಾಂಗ್ರೆಸ್ ಮುನ್ನಡೆ ಗಳಿಸಿತ್ತು. ದಿಲ್ಲಿ ಮತ್ತು ಚಂಡೀಗಢಗಳಲ್ಲಿರುವ ಪಕ್ಷದ ಕಚೇರಿಗಳಲ್ಲಿ ಸಂಭ್ರಮ ನೆಲೆಸಿತ್ತು.
ಆದರೆ, ಬಳಿಕ ಬಿಜೆಪಿಯು ಮುನ್ನಡೆ ಗಳಿಸುತ್ತಾ ಸಾಗಿ ನಿರ್ಣಾಯಕ ವಿಜಯವನ್ನು ಗಳಿಸಿದೆ.
‘‘ಹರ್ಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶವು ತೀರಾ ಅನಿರೀಕ್ಷಿತ ಮತ್ತು ಅಸ್ವೀಕಾರಾರ್ಹವಾಗಿದೆ. ನಮಗೆ ಹಿಸಾರ್, ಮಹೇಂದ್ರಗಢ ಮತ್ತು ಪಾಣಿಪತ್ ಜಿಲ್ಲೆಗಳಿಂದ ಇಲೆಕ್ಟ್ರಾನಿಕ್ ಮತಯಂತ್ರಗಳ ವೈರುಧ್ಯಗಳ ಬಗ್ಗೆ ದೂರುಗಳು ಬಂದಿವೆ. ನಮ್ಮ ಅಭ್ಯರ್ಥಿಗಳು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೆ, ನಾವು ಈ ಎಲ್ಲಾ ದೂರುಗಳನ್ನು ಚುನಾವಣಾ ಆಯೋಗಕ್ಕೆ ಒಯ್ಯುತ್ತೇವೆ’’ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಹೇಳಿದರು.