ಹರ್ಯಾಣ : ರೈತ ಹೋರಾಟಗಾರ ನವದೀಪ್‌ ಸಿಂಗ್ ಬಂಧನ

Update: 2024-03-30 15:35 GMT

ನವದೀಪ್‌ ಸಿಂಗ್ | Photo: X \ @ThePrintIndia

ಅಂಬಾಲಾ : ಕಳೆದ ತಿಂಗಳು ರೈತರ ‘ದಿಲ್ಲಿ ಚಲೋ’ ಪ್ರತಿಭಟನೆ ಸಂದರ್ಭ ಕೊಲೆ ಯತ್ನ ಮತ್ತು ಪೋಲಿಸ್ ಸಿಬ್ಬಂದಿಗಳ ಮೇಲೆ ಹಲ್ಲೆ ಆರೋಪಗಳಲ್ಲಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರೈತ ಹೋರಾಟಗಾರ ನವದೀಪ್‌ ಸಿಂಗ್ ಜಲ್ಬೆರಾ ಅವರನ್ನು ಹರ್ಯಾಣ ಪೋಲೀಸರು ಬಂಧಿಸಿದ್ದಾರೆ.

ಫೆ.21ರಂದು ಪಂಜಾಬ್-ಹರ್ಯಾಣ ಗಡಿಯಲ್ಲಿ ಪೋಲಿಸರೊಂದಿಗೆ ಘರ್ಷಣೆ ಸಂದರ್ಭದಲ್ಲಿ ಕೊಲ್ಲಲ್ಪಟ್ಟಿದ್ದ ಪಂಹಾಬಿನ ಬಠಿಂಡಾದ ರೈತ ಶುಭಕರಣ್ ಸಿಂಗ್ (21) ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸಂಯುಕ್ತ ಕಿಸಾನ ಮೋರ್ಚಾ ಮತ್ತು ಕಿಸಾನ ಮುಕ್ತಿ ಮೋರ್ಚಾ ರವಿವಾರ ಕರೆದಿರುವ ಸಮಾವೇಶಕ್ಕೆ ಮುನ್ನ ಜಲ್ಬೆರಾರನ್ನು ಬಂಧಿಸಲಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಎರಡು ದಿನಗಳ ಪೋಲಿಸ್ ಕಸ್ಟಡಿಯನ್ನು ವಿಧಿಸಲಾಗಿದೆ.

ಅಂಬಾಲಾ ಸಮೀಪದ ಗ್ರಾಮದ ನಿವಾಸಿ ಜಲ್ಬೆರಾ 2020 ನವಂಬರ್ನಲ್ಲಿ ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರ ಜಲಫಿರಂಗಿಯ ಮೇಲೆ ಹತ್ತುವ ಮೂಲಕ ‘ವಾಟರ್-ಕ್ಯಾನನ್ ಮ್ಯಾನ್ ’ಎಂದೇ ಪ್ರಸಿದ್ಧರಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಕಕ್ಷಿದಾರ ಸೇರಿದಂತೆ ಮೂವರನ್ನು ಪೋಲಿಸರು ಬಂಧಿಸಿದ್ದಾರೆ ಎಂದು ಜಲ್ಬೆರಾ ಪರ ವಕೀಲ ರೋಹಿತ ಜೈನ್ ತಿಳಿಸಿದರು.

ಹಲವಾರು ಹಿರಿಯ ರೈತ ನಾಯಕರು ಸೇರಿದಂತೆ 20 ಜನರನ್ನು ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News