ಇಸ್ರೇಲ್ ಗಾಗಿ ಹರ್ಯಾಣ ಸರ್ಕಾರದಿಂದ 10 ಸಾವಿರ ಕಾರ್ಮಿಕರ ನೇಮಕ: ವ್ಯಾಪಕ ವಿರೋಧ
ಚಂಡೀಗಢ: ಅತ್ಯಧಿಕ ನಿರುದ್ಯೋಗ ಸಮಸ್ಯೆಯಿಂದಾಗಿ ಕಂಗೆಟ್ಟಿರುವ ಹರ್ಯಾಣ ಸರ್ಕಾರ, ನಿರ್ಮಾಣ ಕಾಮಗಾರಿ ಕೈಗೊಳ್ಳುವ ಸಲುವಾಗಿ 10 ಸಾವಿರ ಮಂದಿಯನ್ನು ಇಸ್ರೇಲ್ ಗೆ ಕಳುಹಿಸುವ ಸಂಬಂಧ ಹೊರಡಿಸಿರುವ ಜಾಹೀರಾತು ವ್ಯಾಪಕ ಟೀಕೆಗೆ ಗುರಿಯಾಗಿದೆ. ಹಮಾಸ್ ಜತೆಗೆ ಎರಡು ತಿಂಗಳ ಭೀಕರ ಕದನದಿಂದಾಗಿ ಕಟ್ಟಡ ಕಾರ್ಮಿಕರ ಸಮಸ್ಯೆ ಎದುರಿಸುತ್ತಿರುವ ಇಸ್ರೇಲ್ ಗೆ ಈ ಕಾರ್ಮಿಕರನ್ನು ಕಳುಹಿಸಲು ಉದ್ದೇಶಿಸಲಾಗಿದೆ.
ಸರ್ಕಾರದ ಈ ಜಾಹೀರಾತಿಗೆ ಕಾರ್ಮಿಕರು ಮತ್ತು ವಿರೋಧ ಪಕ್ಷದ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಯುದ್ಧ ಪ್ರದೇಶಕ್ಕೆ ಭಾರತೀಯರನ್ನು ಕಳುಹಿಸುವ ಪ್ರಸ್ತಾವ ಖಂಡನೀಯ ಎಂದು ಹೇಳಿವೆ. ಫೆಲಸ್ತೀನಿ ಕಾರ್ಮಿಕರ ಬದಲು ಇಸ್ರೇಲ್ ನಲ್ಲಿ ಭಾರತೀಯ ಕಟ್ಟಡ ಕಾರ್ಮಿಕರನ್ನು ನಿಯೋಜಿಸುವ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರು ಸಂಸತ್ತಿಗೆ ಮಾಹಿತಿ ನೀಡಿದ ಬೆನ್ನಲ್ಲೇ ಈ ಜಾಹೀರಾತು ಪ್ರಕಟವಾಗಿದೆ.
ಆದರೆ ಹರ್ಯಾಣ ಸರ್ಕಾರ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದು, ಇತರ ದೇಶಗಳಲ್ಲಿ ಉದ್ಯೋಗದ ಆಮಿಷ ನೀಡಿ ಜನರನ್ನು ಸೆಳೆಯುವುದನ್ನು ತಪ್ಪಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಿರುವುದಾಗಿ ಹೇಳಿಕೊಂಡಿದೆ. ಯಾರಿಗೆ ಇಸ್ರೇಲ್ ಗೆ ತೆರಳಲು ಅಸಾಧ್ಯ ಎನಿಸುತ್ತದೆಯೋ ಅಂಥವರನ್ನು ಕಡ್ಡಾಯಪಡಿಸುವುದಿಲ್ಲ ಎಂದು ಹೇಳಿದೆ.
ಡಿಸೆಂಬರ್ 15ರ ಸಂಚಿಕೆಯಲ್ಲಿ ಈ ಜಾಹೀರಾತು ಪ್ರಕಟವಾಗಿದ್ದು, ಹರ್ಯಾಣ ಕುಶಲ್ ರೋಜ್ಗಾರ್ ನಿಗಮ ಈ ಜಾಹೀರಾತು ನೀಡಿದೆ. ದೇಶದಲ್ಲೇ ಅತ್ಯಧಿಕ ನಿರುದ್ಯೋಗ ದರ ಹರ್ಯಾಣದಲ್ಲಿ ದಾಖಲಾಗಿದ್ದು, ಇಸ್ರೇಲಿನಲ್ಲಿ 90 ಸಾವಿರ ಫೆಲಸ್ತೀನಿಯನ್ನರ ಕೆಲಸದ ಪರವಾನಗಿಯನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಆ ದೇಶದಲ್ಲಿ ಕಟ್ಟಡ ಕಾರ್ಮಿಕರ ಕೊರತೆ ತೀವ್ರವಾಗಿದೆ.
ಹರ್ಯಾಣದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದರೆ 2013-14ರ ಅವಧಿಯಲ್ಲಿ ನಿರುದ್ಯೋಗ ದರ ಶೇಕಡ 2.9ರಷ್ಟಿದ್ದರೆ, 2021-22ರಲ್ಲಿ ಇದು ಶೇಕಡ 9ಕ್ಕೆ ಹೆಚ್ಚಿದೆ. 2023ರ ಜುಲೈ 31ರವರೆಗೆ ರಾಜ್ಯದ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ 5.44 ಲಕ್ಷ ನಿರುದ್ಯೋಗಿ ಯುವಕರು ಹೆಸರು ನೋಂದಾಯಿಸಿಕೊಂಡಿದ್ದಾರೆ.