ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದ್ದ ವ್ಯಕ್ತಿಯನ್ನು ಜೀವಂತವಾಗಿಸಿದ ವೇಗ ನಿಯಂತ್ರಕ!
ಕೊಲ್ಹಾಪುರ: ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲ್ಪಟ್ಟಿದ್ದ ವ್ಯಕ್ತಿಯೊಬ್ಬರು ರಸ್ತೆಯಲ್ಲಿನ ವೇಗ ನಿಯಂತ್ರಕ ಅಲುಗಾಡಿಸಿದ ತೀವ್ರತೆಗೆ ಜೀವಂತವಾಗಿರುವ ಅಚ್ಚರಿಯ ಘಟನೆ ಪಶ್ಚಿಮ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಸಬಾ-ಬವಾಡಾದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಡಿಸೆಂಬರ್ 16ರಂದು ಹೃದಯಾಘಾತಕ್ಕೆ ತುತ್ತಾಗಿದ್ದ ಕಸಬಾ-ಬವಾಡಾ ಗ್ರಾಮದ ನಿವಾಸಿ ಪಾಂಡುರಂಗ್ ಉಲ್ಪೆಯನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ, ಅವರ ಪರೀಕ್ಷೆ ನಡೆಸಿದ್ದ ವೈದ್ಯರು ಉಲ್ಪೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು. ಹೀಗಾಗಿ, ಅವರನ್ನು ಮರಳಿ ಆ್ಯಂಬುಲೆನ್ಸ್ ನಲ್ಲಿ ಮನೆಗೆ ವಾಪಸು ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ, ಮಾರ್ಗಮಧ್ಯದಲ್ಲಿ ಆ್ಯಂಬುಲೆನ್ಸ್ ರಸ್ತೆಯ ವೇಗ ನಿಯಂತ್ರಕವನ್ನು ದಾಟುವಾಗ, ಉಲ್ಪೆಯ ಬೆರಳುಗಳು ಅಲುಗಾಡುತ್ತಿರುವುದನ್ನು ಕುಟುಂಬದ ಸದಸ್ಯರು ಗಮನಿಸಿದ್ದಾರೆ.
ಈ ನಡುವೆ, ಉಲ್ಪೆಯ ಮರಣದ ಸುದ್ದಿ ತಿಳಿದ ಸಂಬಂಧಿಕರು ಹಾಗೂ ನೆರೆಹೊರೆಯವರು ಅವರ ಮನೆಯ ಮುಂದೆ ನೆರೆದಿದ್ದು, ಅವರ ಅಂತ್ಯಕ್ರಿಯೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಉಲ್ಪೆ ದೇಹದಲ್ಲಿ ಚಲನೆ ಕಂಡು ಬಂದ ಕೂಡಲೇ ಅವರನ್ನು ಮತ್ತೊಂದು ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿದ್ದು, ಅವರನ್ನು ಅಲ್ಲಿ 15 ದಿನಗಳ ಕಾಲ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಅವಧಿಯಲ್ಲಿ ಆ್ಯಂಜಿಯೊಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಉಲ್ಪೆ, ಇದೀಗ ಚೇತರಿಸಿಕೊಂಡಿದ್ದಾರೆ. ಸೋಮವಾರ ಆಸ್ಪತ್ರೆಯಿಂದು ಬಿಡುಗಡೆಗೊಂಡು ಮನೆಗೆ ತೆರಳಿರುವ ಉಲ್ಪೆ, 15 ದಿನಗಳ ಹಿಂದೆ ಆ್ಯಂಬುಲೆನ್ಸ್ ವೇಗ ನಿಯಂತ್ರಕದ ಮೇಲೆ ಹರಿದು ಹೋಗಿದ್ದರಿಂದ ಸ್ಮಶಾನಕ್ಕೆ ಹೋಗುವ ಬದಲು ಜೀವಂತವಾಗಿ ಮನೆಗೆ ಮರಳಿದ್ದಾರೆ.
ಡಿಸೆಂಬರ್ 16ರಂದು ನಡೆದ ಸರಣಿ ಸನ್ನಿವೇಶಗಳನ್ನು ಸ್ಮರಿಸಿರುವ ವಿಠ್ಠಲನ ಭಕ್ತರಾದ ಉಲ್ಪೆ, “ಬೆಳಗಿನ ವಾಯು ವಿಹಾರ ಮುಗಿಸಿಕೊಂಡು ಮನೆಗೆ ಬಂದ ನಾನು, ಕುಳಿತುಕೊಂಡು ಚಹಾ ಹೀರುತ್ತಿದ್ದೆ. ಆಗ ನನಗೆ ಸುಸ್ತು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಶೌಚಗೃಹಕ್ಕೆ ತೆರಳಿ ವಾಂತಿ ಮಾಡಿದೆ. ಆನಂತರ, ನನ್ನನ್ನು ಆಸ್ಪತ್ರೆಗೆ ಕರೆದೊಯ್ದವರು ಯಾರು ಎಂಬುದೂ ಸೇರಿದಂತೆ ಮುಂದೇನಾಯಿತೆಂದು ನನಗೆ ತಿಳಿದಿಲ್ಲ” ಎಂದು ಹೇಳಿದ್ದಾರೆ.
ಉಲ್ಪೆಯನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದ ಆಸ್ಪತ್ರೆಗೆ ಈವರೆಗೆ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.