ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶದಲ್ಲಿ ಭಾರೀ ಮಳೆ : ಹವಾಮಾನ ಇಲಾಖೆ ಎಚ್ಚರಿಕೆ
ಹೊಸದಿಲ್ಲಿ: ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ಚಂಡಮಾರುತದಿಂದಾಗಿ ಶನಿವಾರ ಮತ್ತು ರವಿವಾರ ತಮಿಳುನಾಡು, ಪುದುಚೇರಿ ಮತ್ತು ಆಂಧ್ರಪ್ರದೇಶ ರಾಜ್ಯಗಳ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಳ ಕೊಲ್ಲಿಯಲ್ಲಿ ಈಗಾಗಲೇ ಕಡಿಮೆ ಒತ್ತಡ ಪ್ರದೇಶವೊಂದು ನಿರ್ಮಾಣವಾಗಿದ್ದು, ಅದು ಶನಿವಾರದ ವೇಳೆಗೆ ಪ್ರಬಲಗೊಂಡು ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಬುಧವಾರ ತಿಳಿಸಿದೆ. ಚಂಡಮಾರುತವು ದಕ್ಷಿಣ ಭಾರತದತ್ತ ಮುಂದುವರಿಯುವುದೆಂದು ನಿರೀಕ್ಷಿಸಲಾಗಿದೆ.
ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಿರುವ ಬಗ್ಗೆ ಹವಾಮಾನ ಇಲಾಖೆಯು ಸೋಮವಾರ ಮಾಹಿತಿ ನೀಡಿತ್ತು.
ಕಡಿಮೆ ಒತ್ತಡ ಪ್ರದೇಶವು ಚಂಡಮಾರುತವಾಗಿ ಬಲಗೊಂಡರೆ, ಅದನ್ನು ‘ಮಿಚಾಂಗ್’ ಎಂಬುದಾಗಿ ಕರೆಯಲಾಗುವುದು ಎಂದು ‘ವೆದರ್ ಚಾನೆಲ್’ವರದಿ ಮಾಡಿತ್ತು. ಈ ಹೆಸರನ್ನು ಮ್ಯಾನ್ಮಾರ್ ಸೂಚಿಸಿದೆ. ಇದು ಈ ವರ್ಷ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ನಾಲ್ಕನೇ ಮತ್ತು ಹಿಂದೂ ಮಹಾ ಸಾಗರದ ಆರನೇ ಚಂಡಮಾರುತವಾಗಿದೆ.