ಭಾರೀ ಮಳೆ: ಕೇರಳದ ಹಲವು ಪ್ರದೇಶಗಳು ಜಲಾವೃತ; ತಮಿಳುನಾಡಿನಲ್ಲಿ ಶಾಲೆಗಳಿಗೆ ರಜೆ
ತಿರುವನಂತಪುರ: ಕೇರಳದ ದಕ್ಷಿಣ ಭಾಗದಲ್ಲಿ ಭಾರೀ ಮಳೆ ಎಡೆಬಿಡದೆ ಸುರಿಯುತ್ತಿರುವುದು ಮುಂದುವರಿದಿದ್ದು, ಹಲವು ನಗರಗಳಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಬೆಟ್ಟ, ಗುಡ್ಡ ಪ್ರದೇಶಗಳು ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವವರರಿಗೆ ಆಡಳಿತ ಮುನ್ನೆಚ್ಚರಿಕೆ ನೀಡಿದೆ. ಇಡುಕ್ಕಿ ಹಾಗೂ ಪತ್ತನಂತಿಟ್ಟ ಜಿಲ್ಲೆಗಳ ಬೆಟ್ಟ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಹಲವು ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಸಾಮಾನ್ಯ ಜನಜೀವನಕ್ಕೆ ಅಡ್ಡಿ ಉಂಟಾಗಿದೆ.
ಎಡೆಬಿಡದೆ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪತ್ತನಂತಿಟ್ಟದಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಶಬರಿಮಲೆ ಯಾತ್ರಾರ್ಥಿಗಳ ಭದ್ರತಾ ವ್ಯವಸ್ಥೆಯ ಕುರಿತು ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠರಿಗೆ ದೇವಸ್ವಂ ಸಚಿವ ಕೆ. ರಾಧಾಕೃಷ್ಣನ್ ನಿರ್ದೇಶಿಸಿದ್ದಾರೆ.
ಕೇರಳದ ರಾಜಧಾನಿ ತಿರುವನಂತಪುರದಲ್ಲಿ 15 ಸೆ. ಮೀ. ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆಯಿಂದ ತೀವ್ರ ಹಾನಿಗೀಡಾದ ಇನ್ನೊಂದು ಪ್ರದೇಶ ಕುನ್ನತ್ತಾನಂನಲ್ಲಿ ಕೂಡ 15 ಸೆ.ಮೀ. ಮಳೆ ಬಿದ್ದಿದೆ. ಇದರಿಂದ ಇಲ್ಲಿನ ತಗ್ಗು ಪ್ರದೇಶಗಳು ಜಲಾವೃತವಾಗಿವೆ ಹಾಗೂ ಸಂಚಾರಕ್ಕೆ ಅಡೆ ತಡೆ ಉಂಟಾಗಿದೆ. ಎನಾಡಿಮಂಗಳಂ, ಪೀರ್ಮದೆ ಹಾಗೂ ಒಟ್ಟಪಾಳಂನಲ್ಲಿ ಕ್ರಮವಾಗಿ 13, 12 ಹಾಗೂ 11 ಸೆ.ಮೀ. ಮಳೆ ಬಿದ್ದಿದೆ.
ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದ ಜಲಾನಯನ ಪ್ರದೇಶದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ಇಡುಕ್ಕಿ ಜಿಲ್ಲೆಯಲ್ಲಿರುವ ಕಲ್ಲರ್ಕುಟ್ಟಿ ಹಾಗೂ ಪಂಬಾ ಅಣೆಕಟ್ಟುಗಳ ಬಾಗಿಲನ್ನು ಆಡಳಿತ ಮೇಲೆತ್ತಿದೆ. ಭಾರೀ ಮಳೆಯಿಂದ ತಿರುವಲ್ಲ ಹಾಗೂ ಕೊನ್ನಿ ಪ್ರದೇಶಗಳಲ್ಲಿ ಕೃಷಿ ಹಾಗೂ ಸೊತ್ತುಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ.
ನೆರೆಯ ರಾಜ್ಯವಾದ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಕೂಡ ಭಾರೀ ಮಳೆ ಸುರಿದಿದೆ. ಈ ಹಿನ್ನೆಲೆಯಲ್ಲಿ ತೆಂಕಾಶಿ, ವಿರುಥುನಗರ್, ಪುದುಕೋಟೈ, ನೀಲಗಿರಿ, ಥೇನಿ, ತಿರುನಲ್ವೇಲಿ, ಕನ್ಯಾಕುಮಾರಿ ಹಾಗೂ ತೂತುಕುಡಿಯಲ್ಲಿಯ ಎಲ್ಲಾ ಸರಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಜಿಲ್ಲಾಧಿಕಾರಿ ಗುರುವಾರ ರಜೆ ಘೋಷಿಸಿದ್ದಾರೆ.
ನೀಲಗಿರಿ, ಕೊಯಮತ್ತೂರು, ಥೇನಿ, ದಿಂಡುಗಲ್, ಶಿವಗಂಗೈ ಹಾಗೂ ಪುದುಕೋಟೈ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಿದೆ. ಶಿವಂಗೆಗೈ, ಪುದುಕೋಟೈ, ರಾಮನಾಥಪುರಂ, ಥೇನಿಯಿಂದ ದಿಂಡುಗಲ್, ಮಧುರೈ, ಕೊಯಮತ್ತೂರು, ವಿರುದ್ಧನಗರ್, ತೆಂಕಾಶಿ, ತಿರುನಲ್ವೆಲಿ, ತೂತುಕುಡಿ, ಕನ್ಯಾಕುಮಾರಿಯ ಕೆಲವು ಸ್ಥಳಗಳಲ್ಲಿ ಹಾಗೂ ತಿರುವಳ್ಳೂರು, ಚೆನ್ನೈ, ಚೆಂಗಲ್ಟು, ಕಾಂಚಿಪುರಂ, ರಾಣಿಪೇಟೆ, ವೆಲ್ಳೂರು, ತಿರುಪಟ್ಟೂರು, ತಿರುವನಮಲೈಯ ದುರ್ಗಮ ಪ್ರದೇಶಗಳಲ್ಲಿ ಗುಡುಗಿನಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.