ಆಂಧ್ರಪ್ರದೇಶದಲ್ಲಿ ಆಘಾತಕಾರಿ ಘಟನೆ: ಹುಡುಗಿಯರ ಹಾಸ್ಟೆಲ್ ವಾಶ್‌ರೂಮ್‌ಗಳಲ್ಲಿ ವಿಡಿಯೋ ಮಾಡಿ ಮಾರಾಟ
ವಿಜಯವಾಡ: ಕೃಷ್ಣಾ ಜಿಲ್ಲೆಯ ಗುಡಿವಾಡದಲ್ಲಿರುವ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಹುಡುಗಿಯರ ಹಾಸ್ಟೆಲ್ ವಾಶ್ ರೂಂನಲ್ಲಿ ಹಿಡನ್ ಕ್ಯಾಮೆರಾಗಳನ್ನು ಪತ್ತೆ ಹಚ್ಚಿದ ವಿದ್ಯಾರ್ಥಿಗಳು ಮಧ್ಯರಾತ್ರಿ ಪ್ರತಿಭಟನೆ ಗುರುವಾರ ವರದಿಯಾಗಿದೆ.
ಅಂತಿಮ ವರ್ಷದ ಬಿ.ಟೆಕ್ ವಿದ್ಯಾರ್ಥಿಯೊಬ್ಬ ಮತ್ತೊಬ್ಬ ವಿದ್ಯಾರ್ಥಿಯ ನೆರವಿನೊಂದಿಗೆ ಹಿಡನ್ ಕ್ಯಾಮೆರಾಗಳಲ್ಲಿ ಸೆರೆಹಿಡಿದ ವಿಡಿಯೋಗಳನ್ನು ಮಾರಾಟ ಮಾಡುತ್ತಿದ್ದ ಎಂಬ ಆರೋಪದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು ಎಂದು ತಿಳಿದುಬಂದಿದೆ.
ಹಾಸ್ಟೆಲ್ ಆವರಣದಲ್ಲಿ ಗುಂಪು ಸೇರಿದ ಪ್ರತಿಭಟನಾನಿರತ ವಿದ್ಯಾರ್ಥಿಗಳು, ಬಾಲಕಿಯರ ವಾಶ್ ರೂಂನಲ್ಲಿ ಹಿಡನ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಆರೋಪಿಸಿದರು.
ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ವಿದ್ಯಾರ್ಥಿಯೊಬ್ಬನಿಂದ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಅನ್ನು ವಶಪಡಿಸಿಕೊಂಡರು ಎನ್ನಲಾಗಿದೆ.
ಮೂಲಗಳ ಪ್ರಕಾರ, ವಿಜಯ್ ಎಂಬ ಅಂತಿಮ ವರ್ಷದ ಬಿ.ಟೆಕ್ ವಿದ್ಯಾರ್ಥಿಯು ಹಿಡನ್ ಕ್ಯಾಮೆರಾಗಳಿಂದ ಸೆರೆಹಿಡಿಯಲಾದ ವೀಡಿಯೊಗಳನ್ನು ತನ್ನ ಗೆಳೆಯನೊಂದಿಗೆ ಸೇರಿಕೊಂಡು ಮಾರಾಟ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.
ಕೆಲವು ವಿದ್ಯಾರ್ಥಿಗಳು ಆರೋಪಿಯ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಹಾಸ್ಟೆಲ್‌ಗೆ ಆಗಮಿಸಿದ ಪೊಲೀಸರು ಜೂನಿಯರ್ ಹಾಗೂ ಸೀನಿಯರ್ ವಿದ್ಯಾರ್ಥಿಗಳನ್ನು ನಿಯಂತ್ರಿಸಿ ವಿಜಯ್ ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.
ಆರೋಪಿಯ ಬಳಿ ಇದ್ದ ಲ್ಯಾಪ್‌ಟಾಪ್ ಮತ್ತು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಮುಂಜಾನೆ 3.30ರವರೆಗೂ ಉದ್ವಿಗ್ನ ಪರಿಸ್ಥಿತಿ ಇತ್ತು ಎಂದು ತಿಳಿದು ಬಂದಿದೆ.