ದೀರ್ಘಾವಧಿವರೆಗೂ ಅಧಿಕ ಬಡ್ಡಿ ದರ ಉಳಿಕೆ: ಆರ್ ಬಿಐ ಗವರ್ನರ್ ಸುಳಿವು
ಮುಂಬೈ: ದೇಶದಲ್ಲಿ ದೀರ್ಘಾವಧಿವರೆಗೂ ಅಧಿಕ ಬಡ್ಡಿದರ ಉಳಿದುಕೊಳ್ಳಲಿದೆ ಎಂಬ ಸುಳಿವನ್ನು ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೀಡಿದ್ದಾರೆ. ಮೇ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ದರ ಶೇಕಡ 5.75ರಷ್ಟಿದ್ದು, ಸಮೀಕ್ಷೆ ಅಂದಾಜುಗಳ ಪ್ರಕಾರ ಜೂನ್ ತಿಂಗಳ ಹಣದುಬ್ಬರ ದರ ಶೇಡ 5ರಷ್ಟಿರುವ ನಿರೀಕ್ಷೆ ಇದೆ. "ಹಾಲಿ ಹಣದುಬ್ಬರ ದರ ಶೇಕಡ 5ರಷ್ಟಿದ್ದು, ನಮ್ಮ ಗುರಿ ಶೇಕಡ 4 ಆಗಿರುವುದರಿಂದ, ಬಡ್ಡಿದರ ಕಡಿತದ ಬಗ್ಗೆ ಮಾತನಾಡಲು ಕಾಲ ಪಕ್ವವಾಗಿಲ್ಲ" ಎಂದು ಸಿಎನ್ ಬಿಸಿಗೆ ನೀಡಿದ ಸಂದರ್ಶನದಲ್ಲಿ ದಾಸ್ ಹೇಳಿದರು.
ಬಡ್ಡಿದರ ಕಡಿತ 'ಮೌನ ಠೇವಣಿದಾರರ' ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಸಾಮಾನ್ಯವಾಗಿ ಸಾಲಗಾರರಿಂದ ಬಡ್ಡಿದರ ಕಡಿತಕ್ಕೆ ಆಗ್ರಹ ಕೇಳಿ ಬರುತ್ತದೆ ಎಂದು ಗವರ್ನರ್ ಹೇಳಿದ್ದಾರೆ.
ಜಾಗತಿಕವಾಗಿ ಕೆಲ ಕೇಂದ್ರೀಯ ಬ್ಯಾಂಕ್ ಗಳು ಯಾವಾಗ ದರ ಕಡಿತದ ಸಾಧ್ಯತೆ ಇದೆ ಎಂಬ ಮಾರ್ಗಸೂಚಿಗಳನ್ನು ನೀಡಿದ್ದರೂ, ಭಾರತದಲ್ಲಿ ಈ ಬಗ್ಗೆ ಅನಿಶ್ಚಿತತೆ ಇದೆ. ಇಂಥ ಮಾರ್ಗಸೂಚಿಯನ್ನು ಬಿಡುಗಡೆ ಮಾಡುವುದಿಲ್ಲ; ಏಕೆಂದರೆ ಅದು ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮಾರುಕಟ್ಟೆಯಲ್ಲಿ ಮರು ವಿಶ್ವಾಸ ಸೃಷ್ಟಿಸುವುದು ಮತ್ತು ಸ್ಥಿರತೆ ಸೃಷ್ಟಿಸುವುದು ನಮ್ಮ ಉದ್ದೇಶ. ಠೇವಣಿದಾರರ ಮೇಲಾಗುವ ದರ ಕಡಿತದ ವ್ಯತಿರಿಕ್ತ ಪರಿಣಾಮ ಆರ್ ಬಿಐ ಎದುರಿಸುತ್ತಿರುವ ಹೊಸ ಸಮಸ್ಯೆ. ಬ್ಯಾಂಕ್ ಸಾಲಗಳು ಠೇವಣಿಯ ಪ್ರಗತಿಯನ್ನು ಮೀರುತ್ತಿರುವುದು ಕಳವಳಕಾರಿ ಎಂದು ಅವರು ವಿಶ್ಲೇಷಿಸಿದರು. ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಠೇವಣಿ ಪ್ರಗತಿ ವೇಗ ಪಡೆದಿಲ್ಲ ಎನ್ನುವುದು ಬ್ಯಾಂಕ್ ವರದಿಗಳಿಂದ ತಿಳಿದು ಬಂದಿದೆ ಎಂದರು.