ಇಂದೋರ್ ನಲ್ಲಿ ಅತೀ ಹೆಚ್ಚು NOTA ಚಲಾವಣೆ

Update: 2024-06-04 16:40 GMT

ಸಾಂದರ್ಭಿಕ ಚಿತ್ರ | PC : PTI 

ಹೊಸದಿಲ್ಲಿ : ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರದಲ್ಲಿ 2.18 ಮತದಾರರು ‘ಮೇಲಿನ ಯಾರೂ ಅಲ್ಲ’ (ನೋಟಾ) ಆಯ್ಕೆಗೆ ಒತ್ತಿದ್ದಾರೆ. ಇದರೊಂದಿಗೆ ಇಂದೋರ್ನಲ್ಲಿ ಲೋಕಸಭಾ ಚುನಾವಣೆಯ ಇತಿಹಾಸದಲ್ಲೇ ಅತಿ ಹೆಚ್ಚು ನೋಟಾ ದಾಖಲಾದಂತಾಗಿದೆ.

ಒಟ್ಟು ಮತದಾರರಲ್ಲಿ ಶೇ. 14.01 ‘ಮೇಲಿನ ಯಾರೂ ಅಲ್ಲ’ (NOTA)ವನ್ನು ಆಯ್ಕೆ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ನ ಆದೇಶದ ಹಿನ್ನೆಲೆಯಲ್ಲಿ 2013ರಲ್ಲಿ ನೋಟಾವನ್ನು ಪರಿಚಯಿಸಲಾಯಿತು.

2019ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಎಸ್ಸಿ ಮೀಸಲು ಕ್ಷೇತ್ರ ಗೋಪಾಲಗಂಜ್ನಲ್ಲಿ 51,660 ನೋಟಾ ಮತಗಳು ಚಲಾವಣೆಯಾಗಿತ್ತು. ಇದು ಈವರೆಗಿನ ದಾಖಲೆಯಾಗಿತ್ತು.

ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಮಂಗಳವಾರ ಸಂಜೆ 3.15ಕ್ಕೆ ಲಭ್ಯವಿದ್ದ ಮಾಹಿತಿ ಪ್ರಕಾರ ದೇಶಾದ್ಯಂತ 4.67 ಲಕ್ಷಕ್ಕೂ ಅಧಿಕ (ಒಟ್ಟು ಚಲಾವಣೆಯಾದ ಮತದ ಶೇ. 0.9) ನೋಟಾಗಳು ಚಲಾವಣೆಯಾಗಿವೆ.

2019ರ ಲೋಕಸಭಾ ಚುನಾವಣೆಯಲ್ಲಿ 61,31,33,300 ಮತಗಳು ಚಲಾವಣೆಯಾಗಿದ್ದರೆ, 65,14,558 (ಶೇ. 1.06) ನೋಟಾಗಳು ಚಲಾವಣೆಯಾಗಿದ್ದವು. ಅದೇ ರೀತಿ 2014ರ ಲೋಕಸಭೆ ಚುನಾವಣೆಯಲ್ಲಿ 55,38,02,946 ಮತಗಳು ಚಲಾವಣೆಯಾಗಿದ್ದರೆ, 60,02,942 (ಶೇ. 1.08) ನೋಟಾಗಳು ಚಲಾವಣೆಯಾಗಿದ್ದವು.

ನಾಮಪತ್ರ ಹಿಂಪಡೆಯುವ ಕೊನೆಯ ದಿನವಾದ ಎಪ್ರಿಲ್ 29ರಂದು ತನ್ನ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ನಾಮಪತ್ರವನ್ನು ಹಿಂಪಡೆದ ಬಳಿಕ ಇಂದೋರ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಿತ್ತು.

ಬಮ್ ಅವರು ಅನಂತರ ಬಿಜೆಪಿಗೆ ಸೇರಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮೇ 13ರಂದು ಇಂದೋರ್ನಲ್ಲಿ ನಡೆಯುವ ಮತದಾನದಲ್ಲಿ ಇವಿಎಂನಲ್ಲಿರುವ ನೋಟಾ ಆಯ್ಕೆಯನ್ನು ಒತ್ತುವಂತೆ ಮತದಾರರನ್ನು ಆಗ್ರಹಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News