ಹಿಮಾಚಲ ಪ್ರದೇಶ | ಪಕ್ಷಾಂತರಿ ಶಾಸಕರ ಪಿಂಚಣಿ ರದ್ದುಪಡಿಸುವ ಮಸೂದೆ ಅಂಗೀಕಾರ

Update: 2024-09-04 15:00 GMT

ಸುಖ್ವಿಂದರ್ ಸಿಂಗ್ ಸುಖು | PC : PTI 

ಶಿಮ್ಲಾ : ಹಿಮಾಚಲಪ್ರದೇಶದ ಶಾಸಕರು ತಮ್ಮ ಪಕ್ಷಗಳನ್ನು ತೊರೆದು ಬೇರೆ ಪಕ್ಷಗಳಿಗೆ ಸೇರ್ಪಡೆಯಾದರೆ ಅವರಿಗೆ ಪಿಂಚಣಿ ನಿರಾಕರಿಸುವ ನೂತನ ಮಸೂದೆಯನ್ನು ರಾಜ್ಯದ ಕಾಂಗ್ರೆಸ್ ಸರಕಾರ ಬುಧವಾರ ಅನುಮೋದಿಸಿದೆ.

ಪಕ್ಷಾಂತರ ಮಾಡುವ ಶಾಸಕರ ಪಿಂಚಣಿಯನ್ನು ಸ್ಥಗಿತಗೊಳಿಸಲು ಕೋರುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾಗಿತ್ತು. ಪಕ್ಷಾಂತರ ವಿರೋಧಿ ಕಾನೂನಿನಡಿ ಅನರ್ಹಗೊಳ್ಳುವ ಶಾಸಕರಿಗೆ ನೂತನ ಕಾನೂನು ಅನ್ವಯಿಸುತ್ತದೆ.

ಹಿಮಾಚಲಪ್ರದೇಶ ವಿಧಾನಸಭಾ (ಸದಸ್ಯರ ಭತ್ತೆಗಳು ಮತ್ತು ಪಿಂಚಣಿ) ತಿದ್ದುಪಡಿ ಮಸೂದೆ, 2024ನ್ನು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಮಂಡಿಸಿದರು.

‘‘ಸಂವಿಧಾನದ 10ನೇ ಶೆಡ್ಯೂಲ್‌ನಡಿಯಲ್ಲಿ ಯಾವುದೇ ಸಮಯದಲ್ಲಿ ಓರ್ವ ಶಾಸಕ ಅನರ್ಹಗೊಂಡರೆ, ನೂತನ ಕಾಯ್ದೆಯ ಪ್ರಕಾರ ಆ ಸದಸ್ಯ ಪಿಂಚಣಿಗೆ ಅರ್ಹತೆ ಪಡೆಯುವುದಿಲ್ಲ’’ ಎಂದು ನೂತನ ಕಾನೂನು ಹೇಳುತ್ತದೆ.

ಪಕ್ಷಾಂತರ ನಿಷೇಧ ಕಾನೂನಿನಡಿಯಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ಆರು ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಲಾಗಿತ್ತು. 2024-25ರ ಸಾಲಿನ ಬಜೆಟ್ ಅಂಗೀಕಾರದ ವೇಳೆ ಪಕ್ಷದ ಸಚೇತಕಾಜ್ಞೆಯನ್ನು ಉಲ್ಲಂಘಿಸಿ ಸದನಕ್ಕೆ ಗೈರುಹಾಜರಾಗಿರುವುದಕ್ಕಾಗಿ ಪಕ್ಷಾಂತರ ನಿಷೇಧ ಕಾನೂನಿನಡಿ ಅವರನ್ನು ಅನರ್ಹಗೊಳಿಸಲಾಗಿತ್ತು.

ಫೆಬ್ರವರಿಯಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಈ ಆರು ಕಾಂಗ್ರೆಸ್ ಶಾಸಕರು ಬಿಜೆಪಿ ಅಭ್ಯರ್ಥಿಗೆ ಮತಗಳನ್ನು ಹಾಕಿದ್ದರು.

ಈ ಪೈಕಿ ಇಬ್ಬರು ಉಪಚುನಾವಣೆಯಲ್ಲಿ ಗೆದ್ದು ಸದನಕ್ಕೆ ವಾಪಸಾಗಿದ್ದಾರೆ. ಉಳಿದ ನಾಲ್ವರು ಚುನಾವಣೆಯಲ್ಲಿ ಸೋತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News