ನಾನು ಸಂವಿಧಾನ, ಜನತಾ ಜನಾರ್ದನನ ಭಕ್ತ : ಪ್ರಿಯಾಂಕ್ ಖರ್ಗೆ

Update: 2024-01-23 17:12 GMT

ಪ್ರಿಯಾಂಕ್ ಖರ್ಗೆ | Photo: PTI  

ಬೆಂಗಳೂರು : “ನಾನು ಸಂವಿಧಾನ, ಜನತಾ ಜನಾರ್ದನನ ಭಕ್ತ. ಹಾಗಾಗಿ, ಮಂದಿರಗಳಿಗೆ ಸುತ್ತುವ ಅಭ್ಯಾಸವಿಲ್ಲ. ಆದರೆ, ಯಾರಾದರೂ ಕರೆದರೆ ಅಲ್ಲಿನ ಪದ್ಧತಿ ಕಲಿಕೆಯಲು, ನೋಡಲು ಹೋಗುವೆ” ಎಂದು ಐಟಿ ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ನಾನು ಯಾವ ದೇವಾಲಯಕ್ಕೂ ಹೋಗಲ್ಲ. ಈ ಕುರಿತು ನನಗೆ ಭಕ್ತಿ ಇಲ್ಲ, ಏನು ಮಾಡಲಿ” ಎಂದು ಪ್ರಶ್ನೆ ಮಾಡಿದರು.

“ನನಗೆ ಭಕ್ತಿ ಇಲ್ಲ. ಹೀಗಾಗಿ ನಾನು ಯಾವ ದೇವಾಲಯಕ್ಕೂ ಹೋಗಲ್ಲ. ನೀವು ಯಾರಾದರೂ ಪ್ರಿಯಾಂಕ್ ಬನ್ನಿ ಹೋಗಿ ಬರೋಣ ಎಂದು ಕರೆದುಕೊಂಡು ಹೋದರೆ ಬರುತ್ತೇನೆ. ಕಲಿಯಲು ಹೋಗುವುದಕ್ಕೆ ಏನಾಗಬೇಕು? ಅದರೆ, ನಾನು ಸಂವಿಧಾನ, ಜನತಾ ಜನಾರ್ದನನ ಭಕ್ತ” ಎಂದು ನುಡಿದರು.

ಬಿಜೆಪಿಯವರು 3 ಕೋಟಿ ಜನರನ್ನು ಅಯೋಧ್ಯೆಗೆ ಕರೆದುಕೊಂಡು ಹೋಗುವ ಕುರಿತ ಪ್ರತಿಕ್ರಿಯಿಸಿ, “ಬಿಜೆಪಿಯವರು ಜನರನ್ನು ಅಯೋಧ್ಯೆಗೆ ಕರೆದುಕೊಂಡು ಹೋದಲ್ಲಿ ತಪ್ಪೇನಿದೆ? ಅಲ್ಲದೆ, ಬಿಜೆಪಿಯವರು ರಾಮಮಂದಿರಕ್ಕೆ ಕರೆದುಕೊಂಡು ಹೋಗಲಿ. ತೀರ್ಥ ಯಾತ್ರೆ ತಾನೇ, ಮಾಡಿಸಲಿ. ಜನರೂ ಸಹ ಅಲ್ಲಿಗೆ ಹೋಗಿ ನೋಡಿದ ಮೇಲೆ ಬಿಜೆಪಿಯವರ ಬಂಡವಾಳ ಏನೆಂಬುದು ಬಯಲಾಗುತ್ತದೆ” ಎಂದು ಹೇಳಿದರು.

ಉತ್ತರ ಕೊಡಿ: ಅಪೂರ್ಣ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ಏಕೆ ಎಂದು ನಾವು ಕೇಳಿದ ಪ್ರಶ್ನೆ ಅಲ್ಲ. ಇದು ಸಾಧು ಸಂತರ ಪ್ರಶ್ನೆಯಾಗಿದೆ. ಯಾರಿಂದ ಪ್ರಾಣ ಪ್ರತಿಷ್ಠೆ ಮಾಡಿಸಬೇಕಿತ್ತೋ ಅವರು ಈ ಪ್ರಶ್ನೆಯನ್ನು ಮಾಡುತ್ತಿದ್ದಾರೆ. ಉತ್ತರ ಕೊಡಿ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದರು.

ಅದಲ್ಲದೆ, ಬಿಜೆಪಿ ಶಾಸಕರು ಎಷ್ಟು ಜನ ರಾಮಾಯಣ ಓದಿದ್ದಾರೆ? ಎಷ್ಟು ಜನರಿಗೆ ಹನುಮಾನ್ ಚಾಲೀಸಾ ಬರುತ್ತದೆ? ನಾನು ಋಷಿಕೇಶ, ಬನಾರಸ್ ಎಲ್ಲ ಕಡೆ ಹೋಗಿದ್ದೇನೆ. ನಾನು ನಂಬಿರುವುದು ಬಸವತತ್ವ, ಅಂಬೇಡ್ಕರ್ ತತ್ವ ಮತ್ತು ಸಂವಿಧಾನ ತತ್ವ ಎಂದು ಅವರು ನುಡಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News