ಪ್ರಮಾಣವಚನ ಸ್ವೀಕರಿಸಿದ ನಂತರ ಸಚಿವ ಸ್ಥಾನ ಇಷ್ಟವಿಲ್ಲ ಎಂದ ಕೇರಳದ ಸಂಸದ, ನಟ ಸುರೇಶ್‌ ಗೋಪಿ

Update: 2024-06-10 08:17 GMT

Photo: PTI

ಹೊಸದಿಲ್ಲಿ: ಕೇಂದ್ರದ ನೂತನ ಎನ್‌ಡಿಎ ಸರ್ಕಾರದಲ್ಲಿ ರಾಜ್ಯ ಸಚಿವರಾಗಿ ರವಿವಾರ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಕೇರಳದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದ, ನಟ ಸುರೇಶ್‌ ಗೋಪಿ, ತಮಗೆ ಸಚಿವರಾಗುವುದು ಇಷ್ಟವಿಲ್ಲ ಎಂಬ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಸುರೇಶ್‌ ಗೋಪಿ ಅವರು “ತ್ರಿಶೂರಿಗೆ ಓರ್ವ ಕೇಂದ್ರ ಸಚಿವರು, ಮೋದಿಯ ಗ್ಯಾರಂಟಿ” ಎಂದು ಹೇಳಿಕೊಂಡಿದ್ದರು. ಅವರ ಹೊರತಾಗಿ ಕೇರಳದಿಂದ ಹಿರಿಯ ನಾಯಕ ಜಾರ್ಜ್‌ ಕುರಿಯನ್‌ ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಆದರೆ ಸುರೇಶ್‌ ಗೋಪಿ ಪ್ರಮಾಣವಚನ ಸ್ವೀಕರಿಸಿದ ಕೆಲ ಗಂಟೆಗಳ ನಂತರ ಸುದ್ದಿ ವಾಹಿನಿಗಳ ಜೊತೆ ಮಾತನಾಡಿ “ನಾನು ಸಂಸದನಾಗಿ ಕೆಲಸ ಮಾಡಲು ಬಯಸುತ್ತೇನೆ. ನನಗೆ ಅದು (ಸಚಿವ ಸ್ಥಾನ) ಬೇಡ. ಅದರಲ್ಲಿ ಆಸಕ್ತಿಯಿಲ್ಲ ಎಂದು ಪಕ್ಷಕ್ಕೆ ತಿಳಿಸಿದ್ದೇನೆ. ಶೀಘ್ರ ನನ್ನನ್ನು ಈ ಜವಾಬ್ದಾರಿಯಿಂದ ಮುಕ್ತಗೊಳಿಸುವರೆಂದು ನಂಬಿದ್ದೇನೆ,” ಎಂದು ಅವರು ಹೇಳಿದರು.

“ತ್ರಿಶೂರಿನ ಜನತೆಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತು. ಸಂಸದನಾಗಿ ನಾನು ಚೆನ್ನಾಗಿ ಕಾರ್ಯನಿರ್ವಹಿಸುತ್ತೇನೆ. ನನಗೆ ಚಲನಚಿತ್ರಗಳಲ್ಲಿ ನಟಿಸಬೇಕು. ಪಕ್ಷ ನಿರ್ಧರಿಸಲಿ,”ಎಂದು ಅವರು ಹೇಳಿದರು.

ಸುರೇಶ್‌ ಗೋಪಿ ಅವರ ಕೈಯ್ಯಲ್ಲಿ ಈಗಾಗಲೇ ಕೆಲ ಚಲನಚಿತ್ರಗಳಿವೆ.

ರವಿವಾರ ದಿಲ್ಲಿಗೆ ತೆರಳುವ ಮುನ್ನ”ಇದು (ಸಚಿವ ಸ್ಥಾನ) ಮೋದಿ ಅವರ ನಿರ್ಧಾರ. ಅವರು ನನಗೆ ಕರೆ ಮಾಡಿ ಬರಲು ಹೇಳಿದ್ದಾರೆ". ಅದನ್ನು ಪಾಲಿಸುತ್ತಿದ್ದೇನೆ. ಬೇರೇನೂ ನನಗೆ ತಿಳಿದಿಲ್ಲ,” ಎಂದು ಹೇಳಿದ್ದರು.

ತ್ರಿಶೂರು ಕ್ಷೇತ್ರದಲ್ಲಿ ಸಿಪಿಐನ ವಿ ಎಸ್‌ ಸುನೀಲ್‌ ಕುಮಾರ್‌ ಅವರೆದುರು 74,000ಕ್ಕೂ ಅಧಿಕ ಮತಗಳ ಅಂತರದಿಂದ ಸುರೇಶ್‌ ಗೋಪಿ ಜಯ ಗಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News