ರಮಝಾನ್ ವೇಳೆ ಗಾಝಾದಲ್ಲಿ ಬಾಂಬ್ ದಾಳಿ ನಿಲ್ಲಿಸಲು ಇಸ್ರೇಲ್‌ಗೆ ವಿಶೇಷ ರಾಯಭಾರಿಯನ್ನು ಕಳಿಸಿದ್ದೆ: ಪ್ರಧಾನಿ ಮೋದಿ
ಹೊಸದಿಲ್ಲಿ: ಪವಿತ್ರ ರಮಝಾನ್ ತಿಂಗಳಿನಲ್ಲಿ ಗಾಝಾದಲ್ಲಿ ಬಾಂಬ್ ದಾಳಿಯನ್ನು ನಿಲ್ಲಿಸುವಂತೆ ಕೋರಿ ತಾನು ಇಸ್ರೇಲ್‌ಗೆ ತಮ್ಮ ರಾಯಭಾರಿಯನ್ನು ಕಳಿಸಿದ್ದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
India Today TVಗೆ ನೀಡಿದ ಸಂದರ್ಶನದಲ್ಲಿ ಮೋದಿ ಈ ಮಾಹಿತಿ ನೀಡಿದ್ದಾರೆ. “ಅದು ರಮಝಾನ್ ತಿಂಗಳಾಗಿತ್ತು. ಆದ್ದರಿಂದ ನನ್ನ ವಿಶೇಷ ರಾಯಭಾರಿಯನ್ನು ಕಳಿಸಿ, ಕನಿಷ್ಠ ರಮಝಾನ್ ತಿಂಗಳಿನಲ್ಲಿ ಗಾಝಾದಲ್ಲಿ ಬಾಂಬ್ ದಾಳಿಗಳನ್ನು ನಡೆಸದಂತೆ ಪ್ರಧಾನಿ (ಬೆಂಜಮಿನ್ ನೆತನ್ಯಾಹು) ಅವರಿಗೆ ವಿವರಿಸಲು ಹೇಳಿದೆ. ಅವರು (ಇಸ್ರೇಲ್) ಅಂತೆಯೇ ನಡೆದುಕೊಳ್ಳಲು ಎಲ್ಲಾ ಪ್ರಯತ್ನ ನಡೆಸಿದರು, ಆದರೆ ಕೊನೆಗೆ ಎರಡು ಮೂರು ದಿನಗಳ ಕಾಲ ಯುದ್ಧ ನಡೆದಿತ್ತು,” ಎಂದು ಮೋದಿ ಹೇಳಿದರು.
“ಮುಸ್ಲಿಂ ವಿಚಾರದಲ್ಲಿ ನನ್ನನ್ನು ಇಲ್ಲಿ ಟೀಕಿಸುತ್ತಲೇ ಇರುತ್ತೀರಿ, ಆದರೆ ಈ ವಿಚಾರವನ್ನು ನಾನು ಪ್ರಚಾರ ಮಾಡಿಲ್ಲ,” ಎಂದು ಮೋದಿ ಹೇಳಿದರು.
“ಕೆಲ ಇತರ ದೇಶಗಳು ಕೂಡ ಇಸ್ರೇಲ್‌ಗೆ ದಾಳಿಗಳನ್ನು ನಿಲ್ಲಿಸಲು ಕೋರಿದರು, ಅವರಿಗೂ ಫಲ ದೊರೆಯಿತು, ನಾನೂ ಪ್ರಯತ್ನಿಸಿದೆ,” ಎಂದು ಮೋದಿ ಹೇಳಿದರು.
ಬಾಯಿ ಮಾತಿನ ಜಾತ್ಯತೀತತೆಯನ್ನು ತಾವು ನಂಬುವುದಿಲ್ಲ ಎಂದು ಪ್ರಧಾನಿ ಹೇಳಿದರು. “ಹಿಂದೆ ಇದೊಂದು ಪರಿಪಾಠವಾಗಿತ್ತು, ಇಸ್ರೇಲ್‌ಗೆ ಹೋದವರು ಫೆಲೆಸ್ತೀನ್‌ಗೂ ಹೋಗಬೇಕಿತ್ತು. ಅಂದರೆ ಜಾತ್ಯತೀತತೆ ತೋರ್ಪಡಿಸಿ ವಾಪಸಾಗಬೇಕಿತ್ತು. ಆದರೆ ಹಾಗೆ ಮಾಡಲು ನಾನು ನಿರಾಕರಿಸಿದೆ,” ಎಂದು ಹೇಳಿದ ಪ್ರಧಾನಿ ತಾನು ಇಸ್ರೇಲ್ ಹಾಗೂ ಫೆಲೆಸ್ತೀನ್‌ಗೆ ಪ್ರತ್ಯೇಕವಾಗಿ ಭೇಟಿ ನೀಡಿದ್ದಾಗಿ ಹೇಳಿದರು.
Maine Gaja me Ramjaan me War rukwa di... pic.twitter.com/EcsHzaj2hp
— Mohammed Zubair (@zoo_bear) May 16, 2024
ರಷ್ಯಾ-ಉಕ್ರೇನ್ ಸಂಘರ್ಷದ ಕುರಿತು ಮಾತನಾಡಿದ ಪ್ರಧಾನಿ, ಭಾರತ ಸರಿಯಾದ ಮಾತುಗಳನ್ನು ಹೇಳಲಿದೆ ಎಂದು ಎರಡೂ ದೇಶಗಳಿಗೆ ಗೊತ್ತಿದೆ ಎಂದರು.
“ರಷ್ಯಾ ಅಧ್ಯಕ್ಷ ಪುಟಿನ್ ನನ್ನನ್ನು ಬಹಳಷ್ಟು ಹೊಗಳುತ್ತಾರೆ ಎಂದ ಮಾತ್ರಕ್ಕೆ ನಾನು ಅವರನ್ನು ಭೇಟಿಯಾಗಿ ಇದು ಯುದ್ಧಕ್ಕೆ ಸಮಯವಲ್ಲ ಎಂದು ಹೇಳಬಾರದೆಂದೇನಿಲ್ಲ. ಯಾವುದು ಸರಿ ಯಾವುದು ತಪ್ಪು ಎಂದು ಸ್ಪಷ್ಟವಾಗಿ ಹೇಳುವ ಕನಿಷ್ಠ ಒಬ್ಬ ಸ್ನೇಹಿತ ತಮಗಿದ್ದಾರೆಂದು ತಿಳಿದು ಅವರೂ ನನ್ನನ್ನು ಗೌರವಿಸುತ್ತಾರೆ. ಉಕ್ರೇನ್ ಕೂಡ ನನ್ನ ಮೇಲೆ, ಭಾರತದ ಮೇಲೆ ನಂಬಿಕೆಯಿರಿಸಿದೆ, ನಾವು ಸರಿಯಾದುದನ್ನೇ ಹೇಳುತ್ತೇವೆ ಎಂದು ನಂಬಿದೆ, ನಾವು ಹಾಗೆಯೇ ಮಾಡುತ್ತಾ ಬಂದಿದ್ದೇವೆ,” ಎಂದು ಪ್ರಧಾನಿ ಹೇಳಿದರು.
ರಷ್ಯಾದಿಂದ ತೈಲ ಖರೀದಿಸುವುದಕ್ಕೆ ಕೇಳಿ ಬಂದ ಟೀಕೆಯ ಕುರಿತು ಮಾತನಾಡಿದ ಪ್ರಧಾನಿ. “ನನ್ನ ದೇಶಕ್ಕೆ ತೈಲ ರಷ್ಯಾದಿಂದ ಬೇಕಿದ್ದರೆ, ನಾನು ಖರೀದಿಸುತ್ತೇನೆ ಮತ್ತು ಅದನ್ನು ಮರೆಮಾಚುವುದಿಲ್ಲ. ಅದನ್ನು ಗುಪ್ತವಾಗಿ ಮಾಡುವುದಿಲ್ಲ, ಅದಕ್ಕಾಗಿ ಯಾರನ್ನೂ ಕೇಳಬೇಕಾಗಿಲ್ಲ. ನನ್ನ ದೇಶಕ್ಕೆ ಅಗ್ಗದ ದರದಲ್ಲಿ ಪೆಟ್ರೋಲ್ ಬೇಕು ಎಂದು ಅಮೆರಿಕಾಗೆ ಹೇಳುತ್ತೇನೆ. ನಾನು ದೇಶವನ್ನು ನನಗೆ ಬೇಕಿದ್ದ ಹಾಗೆ ಆಡಳಿತ ನಡೆಸುತ್ತೇನೆ,” ಎಂದು ಮೋದಿ ಹೇಳಿದರು.