ಚುನಾವಣೆ ಹೊಸ್ತಿಲಲ್ಲೇ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಆಪ್ತನ ನಿವಾಸದ ಮೇಲೆ ಐಟಿ ದಾಳಿ
ರಾಂಚಿ: ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿದ್ದು, ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಆಪ್ತ ಕಾರ್ಯದರ್ಶಿ ಸುನಿಲ್ ಶ್ರೀವಾಸ್ತವ ಅವರ ರಾಂಚಿಯಲ್ಲಿರುವ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಹೇಮಂತ್ ಸೊರೇನ್ ಅವರ ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್, ಆರ್ಜೆಡಿ ಮತ್ತು ಎಡ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. ಹೇಮಂತ್ ಸೊರೇನ್ ಅವರ ಆಪ್ತ ಕಾರ್ಯದರ್ಶಿ ಸುನಿಲ್ ಶ್ರೀವಾಸ್ತವ ಅವರಿಗೆ ಸೇರಿದ ರಾಂಚಿ ಮತ್ತು ಜಮ್ಶೆಡ್ಪುರದಲ್ಲಿನ ಸ್ಥಳಗಳು ಸೇರಿದಂತೆ 9 ಕಡೆಗಳಲ್ಲಿ ದಾಳಿ ನಡೆಸಲಾಗುತ್ತಿದೆ ಎಂದು ಎಎನ್ಐ ವರದಿ ಮಾಡಿದೆ.
ಜಾರ್ಖಂಡ್ ಹೈಕೋರ್ಟ್ ಜೂನ್ ನಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ನಾಯಕ ಹೇಮಂತ್ ಸೊರೇನ್ ಗೆ ಭೂ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಿತ್ತು.
2024ರ ಜನವರಿ 31ರಂದು ಸಿಎಂ ಸೊರೇನ್ ಅವರನ್ನು ಏಳು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಈಡಿ ಬಂಧಿಸಿತ್ತು. ನಂತರ ಹೇಮಂತ್ ಸೊರೇನ್ ರಾಜಭವನಕ್ಕೆ ತೆರಳಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರು. 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ನ.13 ಮತ್ತು 20ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.