ಲೋಕಸಭಾ ಚುನಾವಣೆಗೆ ಮುನ್ನ ಇವಿಎಂಗಗಳನ್ನು ಸರಿಪಡಿಸದಿದ್ದರೆ, ಬಿಜೆಪಿ 400ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಬಹುದು: ಸ್ಯಾಮ್ ಪಿತ್ರೋಡಾ

Update: 2023-12-28 15:23 GMT

ಸ್ಯಾಮ್ ಪಿತ್ರೋಡಾ | Photo: NDTV 

ಹೊಸದಿಲ್ಲಿ : ವಿದ್ಯುನ್ಮಾನ ಮತಯಂತ್ರ (ಇವಿಎಂಗ)ಗಳ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಅವರು, ಇವಿಎಂಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸದಿದ್ದರೆ 2024 ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯು 400ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದ್ದಾರೆ.

ಚುನಾವಣೆಗಳು ಭಾರತದ ಭವಿಷ್ಯವನ್ನು ನಿರ್ಧರಿಸುತ್ತವೆ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಪಿತ್ರೋಡಾ ಹೇಳಿದರು.

ಇವಿಎಂಗಳ ಕುರಿತು ಆತಂಕವನ್ನು ಚುನಾವಣಾ ಆಯೋಗವು ಸದಾ ತಳ್ಳಿಹಾಕುತ್ತಲೇ ಬಂದಿದೆ. ಆದರೆ ಕಾಂಗ್ರೆಸ್ ಸೇರಿದಂತೆ ಕೆಲವು ಪ್ರತಿಪಕ್ಷಗಳ ನಾಯಕರು ಇವಿಎಂಗಳನ್ನು ತಿರುಚಲಾಗುತ್ತಿದೆ ಎಂದು ಆಗಾಗ್ಗೆ ಆರೋಪಿಸಿವೆ.

ಅಯೋಧ್ಯೆಯಲ್ಲಿ ರಾಮಮಂದಿರ ಕುರಿತು ತನ್ನ ಹೇಳಿಕೆಗಳನ್ನು ತಿರುಚಲಾಗಿದೆ ಎಂದೂ ಸಂದರ್ಶನದಲ್ಲಿ ಹೇಳಿದ ಪಿತ್ರೋಡಾ, ಧರ್ಮವು ವೈಯಕ್ತಿಕ ವಿಷಯವಾಗಿದೆ ಮತ್ತು ಅದನ್ನು ರಾಜಕೀಯದೊಂದಿಗೆ ಬೆರೆಸಬಾರದು ಎಂದು ಒತ್ತಿ ಹೇಳಿದರು. ಇಡೀ ದೇಶವೇ ರಾಮಮಂದಿರದ ಗುಂಗಿನಲ್ಲಿರುವುದು ತನಗೆ ಚಿಂತೆಯನ್ನುಂಟು ಮಾಡಿದೆ ಎಂದು ಪಿತ್ರೋಡಾ ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿದ್ದವು.

ಚುನಾವಣೆಗೆ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಮುಂಬರುವ ಮಣಿಪುರದಿಂದ ಮುಂಬೈವರೆಗೆ ಭಾರತ ನ್ಯಾಯ ಯಾತ್ರೆ ಕುರಿತಂತೆ ಪಿತ್ರೋಡಾ, ಮುಂಬರುವ ಚುನಾವಣೆಗಳು ಭಾರತದ ಭವಿಷ್ಯದ ಕುರಿತಾಗಿವೆ. ಯಾವ ರೀತಿಯ ದೇಶವನ್ನು ನಿರ್ಮಿಸಲು ನಾವು ಬಯಸಿದ್ದೇವೆ? ಎಲ್ಲ ಧರ್ಮಗಳನ್ನು,ನಮ್ಮ ಸಂಸ್ಥೆಗಳ ಸ್ವಾಯತ್ತತೆಯನ್ನು ಗೌರವಿಸುವ, ನಮ್ಮ ನಾಗರಿಕ ಸಮಾಜವು ಕಾರ್ಯನಿರ್ವಹಿಸಲು ಅವಕಾಶ ನೀಡುವ ಸಂವಿಧಾನದಲ್ಲಿ ಪ್ರತಿಪಾದಿಸಲಾಗಿರುವ ದೇಶವನ್ನು ನಿರ್ಮಿಸಲು ನೀವು ಬಯಸುತ್ತೀರೋ ಅಥವಾ ಒಂದು ಧರ್ಮದ ಪ್ರಾಬಲ್ಯವನ್ನು ಆಧರಿಸಿರುವ ದೇಶವನ್ನೋ? ಎಂದು ಪ್ರಶ್ನಿಸಿದರು.

ಇವಿಎಂಗಳ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದ ಅವರು, ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಮದನ ಬಿ.ಲೋಕೂರ್ ನೇತೃತ್ವದ ಎನ್ಜಿಒ ʼದಿ ಸಿಟಿಜನ್ಸ್ ಕಮಿಷನ್ ಆನ್ ಇಲೆಕ್ಷನ್ಸ್ʼ ವರದಿಯನ್ನು ಉಲ್ಲೇಖಿಸಿ, ವಿವಿಪ್ಯಾಟ್ ವ್ಯವಸ್ಥೆಯನ್ನು ನಿಜಕ್ಕೂ  ʼವೋಟರ್-ವೆರಿಫೈಡ್ʼ ಆಗಿಸಲು ಪ್ರಸ್ತುತ ವಿನ್ಯಾಸವನ್ನು ಮಾರ್ಪಡಿಸುವುದು ವರದಿಯ ಮುಖ್ಯ ಶಿಫಾರಸು ಆಗಿದೆ ಎಂದು ಹೇಳಿದರು.

ನಾನು ಚುನಾವಣಾ ಆಯೋಗದ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೆ, ಆದರೆ ಅದು ಪ್ರತಿಕ್ರಿಯಿಸಿಲ್ಲ. ಹೀಗಾಗಿ ನಾನು ಮಾತನಾಡಲು ನಿರ್ಧರಿಸಿದೆ. ಐದು ರಾಜ್ಯಗಳ ಚುನಾವಣೆಗಳು ಮುಗಿದು 2024 ಚುನಾವಣೆಯು ಸಮೀಪಿಸುತ್ತಿದೆ ಎನ್ನುವುದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲಎಂದು ಹೇಳಿದ ಪಿತ್ರೋಡಾ, ವರದಿಯ ಆಧಾರದ ಮೇಲೆ ನಾನು ನಂಬಿಕೆಯ ಕೊರತೆಯಿದೆ ಎಂದು ಭಾವಿಸಿದ್ದೇನೆ ಮತ್ತು ನಂಬಿಕೆಯನ್ನು ಪುನರ್ನಿರ್ಮಿಸಲು ಚುನಾವಣಾ ಆಯೋಗವು ಪ್ರತಿಕ್ರಿಯಿಸಲೇಬೇಕುಎಂದರು.

ಪ್ರಜಾಪ್ರಭುತ್ವವು ಹಳಿ ತಪ್ಪಿದೆ ಮತ್ತು ನಾವು ತುಂಬ ನಿರಂಕುಶರಾಗುತ್ತಿದ್ದೇವೆ ಎಂದು ನಾನು ನಂಬಿದ್ದೇನೆ. ಇದೆಲ್ಲವೂ

ʼಒನ್ ಮ್ಯಾನ್ ಶೋʼ ಆಗಿದೆಎಂದು ಅವರು ಹೇಳಿದರು.

ಸಾರ್ವತ್ರಿಕ ಚುನಾವಣೆಯಲ್ಲಿ ತಾನು 400ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುತ್ತೇನೆ ಎಂಬ ಬಿಜೆಪಿಯ ಹೇಳಿಕೆ ಕುರಿತು ಪ್ರಶ್ನೆಗೆ ಪಿತ್ರೋಡಾ, ಅದನ್ನು ದೇಶವು ನಿರ್ಧರಿಸಬೇಕು. ಮುಂದಿನ ಚುನಾವಣೆಗಳಿಗೆ ಮುನ್ನ ಇವಿಎಂ ಸಮಸ್ಯೆಗಳನ್ನು ಬಗೆಹರಿಸಬೇಕು. ಇಲ್ಲದಿದ್ದರೆ ಅವರ ಹೇಳಿಕೆ ನಿಜವಾಗಬಹುದು, ಸಮಸ್ಯೆಗಳನ್ನು ಬಗೆಹರಿಸಿದರೆ ಅದು ನಿಜವಾಗದಿರಬಹುದು ಎಂದು ಉತ್ತರಿಸಿದರು.

ಕಾಂಗ್ರೆಸ್ ಪಕ್ಷವೂ ಭಾಗವಾಗಿರುವ ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟವು ರಾಹುಲ್ ಗಾಂಧಿಯವರನ್ನು  ಪ್ರಧಾನಿ ಹುದ್ದೆಗೆ ಅಭ್ಯರ್ಥಿಯನ್ನಾಗಿ ಆಯ್ದುಕೊಳ್ಳುತ್ತಿಲ್ಲವಲ್ಲ ಎಂಬ ಪ್ರಶ್ನೆಗೆ ಪಿತ್ರೋಡಾ, ಇಂಡಿಯಾ ಮೈತ್ರಿಕೂಟವು ಪ್ರಧಾನಿ ಹುದ್ದೆಗೆ ಯಾರನ್ನೂ ಬಿಂಬಿಸುತ್ತಿಲ್ಲ ಎಂದು ಉತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News