ದಿಲ್ಲಿಯ 44 ಶಾಲೆಗಳಿಗೆ ಬಾಂಬ್ ಬೆದರಿಕೆ: ಪೊಲೀಸರಿಂದ ತೀವ್ರ ಶೋಧ
ಹೊಸದಿಲ್ಲಿ: ಸೋಮವಾರ ಬೆಳಿಗ್ಗೆ ದಿಲ್ಲಿಯ ಪಶ್ಚಿಮ ವಿಹಾರ್ ನಲ್ಲಿರುವ ಜಿಡಿ ಗೋಯೆಂಕಾ, ಆರ್ ಕೆ ಪುರಂನ ಡಿಪಿಎಸ್ ಶಾಲೆ ಸೇರಿದಂತೆ 44 ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದ್ದು, ವಿದ್ಯಾರ್ಥಿಗಳನ್ನು ಮನೆಗೆ ವಾಪಾಸ್ಸು ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ.
ರವಿವಾರ ರಾತ್ರಿ 11:38ಕ್ಕೆ ಇ-ಮೇಲ್ ಮೂಲಕ ಬೆದರಿಕೆ ಸಂದೇಶವನ್ನು ಕಳುಹಿಸಲಾಗಿದೆ. ʼಶಾಲಾ ಕಟ್ಟಡಗಳ ಒಳಗೆ ಅನೇಕ ಬಾಂಬ್ ಗಳನ್ನು ಇರಿಸಲಾಗಿದೆ. ಬಾಂಬ್ ಗಳು ಚಿಕ್ಕದಾಗಿದೆ ಮತ್ತು ಸರಿಯಾಗಿ ಅಡಗಿಸಿಟ್ಟಿದ್ದೇವೆ, ಇದರಿಂದ ಕಟ್ಟಡಕ್ಕೆ ಹೆಚ್ಚು ಹಾನಿಯಾಗುವುದಿಲ್ಲ, ಆದರೆ ಬಾಂಬ್ ಸ್ಫೋಟಗೊಂಡಾಗ ಅನೇಕ ಜನರು ಗಾಯಗೊಳ್ಳುತ್ತಾರೆ ಮತ್ತು ಕೈಕಾಲುಗಳನ್ನು ಕಳೆದುಕೊಳ್ಳುತ್ತಾರೆ ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸಲು 30,000 ಡಾಲರ್ ಹಣ ನೀಡಬೇಕುʼ ಎಂದು ಬೆದರಿಕೆ ಸಂದೇಶದಲ್ಲಿ ಬೇಡಿಕೆಯಿಡಲಾಗಿದೆ ಎನ್ನಲಾಗಿದೆ.
ಬೆದರಿಕೆ ಕರೆ ಬೆನ್ನಲ್ಲೇ ಕಾರ್ಯ ಪ್ರವೃತ್ತರಾದ ದಿಲ್ಲಿ ಪೊಲೀಸರು ಐಪಿ ವಿಳಾಸವನ್ನು ಪರಿಶೀಲಿಸಿ ಇಮೇಲ್ ಕಳುಹಿಸಿರುವ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಗ್ನಿಶಾಮಕ ದಳದ ಅಧಿಕಾರಿಗಳು, ಶ್ವಾನ ದಳ, ಬಾಂಬ್ ಪತ್ತೆ ದಳ, ಸ್ಥಳೀಯ ಪೊಲೀಸರು ಶಾಲೆಗಳಿಗೆ ಆಗಮಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆದರೆ, ಇಲ್ಲಿಯವರೆಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.