ಅಸ್ಸಾಂನಲ್ಲಿ ನೆರೆ ಪರಿಸ್ಥಿತಿ ಸುಧಾರಣೆ ; ನದಿಗಳಲ್ಲಿ ನೀರಿನ ಮಟ್ಟ ಇಳಿಕೆ

Update: 2024-07-10 15:47 GMT

PC : PTI 

ಗುವಾಹಟಿ : ಅಸ್ಸಾಂನಲ್ಲಿ ನೆರೆ ಪರಿಸ್ಥಿತಿ ಬುಧವಾರ ಸುಧಾರಿಸಿದ್ದು, ನದಿಗಳಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದೆ.

ಕಳೆದ ಕೆಲವು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ 26 ಜಿಲ್ಲೆಗಳಲ್ಲಿ 17 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ. ಕಚಾರ್ನಲ್ಲಿನಲ್ಲಿ ಇಬ್ಬರು ಹಾಗೂ ಧುಬ್ರಿ, ಧೇಮಾಜಿ, ದಕ್ಷಿಣ ಸಾಲ್ಮರಾ, ನಾಗಾಂವ್ ಹಾಗೂ ಶಿವಸಾಗರ್ನಲ್ಲಿ ತಲಾ ಒಬ್ಬರು ಸೇರಿದಂತೆ ಒಟ್ಟು 7 ಮಂದಿ ಸಾವನ್ನಪ್ಪಿರುವುದು ಮಂಗಳವಾರ ವರದಿಯಾಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್ಡಿಎಂಎ) ತಿಳಿಸಿದೆ.

ಸೋಮವಾರ 49,014.6 ಹೆಕ್ಟೇರ್ ಬೆಳೆ ಭೂಮಿ ಜಲಾವೃತವಾಗಿತ್ತು. ಆದರೆ, ಬುಧವಾರ ಅದು 38,870.3 ಹೆಕ್ಟೇರ್ಗೆ ಇಳಿಕೆಯಾಗಿದೆ. ಮಳೆಯಿಂದ ಧುಬ್ರಿಯಲ್ಲಿ 3,54,045, ಕಚಾರ್ನಲ್ಲಿ 1,81,545, ಶಿವಸಾಗರ್ನಲ್ಲಿ 1,36,547, ಬಾರ್ಪೇಟಾದಲ್ಲಿ 1.16.074 ಹಾಗೂ ಗೋಲಾಘಾಟ್ನಲ್ಲಿ 1.09,475 ಜನರು ಸಂತ್ರಸ್ತರಾಗಿದ್ದಾರೆ.

ಒಟ್ಟು 48,021 ಸಂತ್ರಸ್ತ ಜನರು 507 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಇತರ 104,665 ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ಪೂರೈಸಲಾಗಿದೆ.

ನೆರೆಯಿಂದಾಗಿ ಕಾಝಿರಂಗಾ ರಾಷ್ಟ್ರೀಯ ಉದ್ಯಾನವನಕ್ಕೆ ತೀವ್ರ ಹಾನಿ ಉಂಟಾಗಿದೆ. ಇಲ್ಲಿಂದ 159 ವನ್ಯ ಜೀವಿಗಳು ನೆರೆಯಲ್ಲಿ ಕೊಚ್ಚಿಕೊಂಡು ಹೋಗಿದ್ದು, ಅವುಗಳಲ್ಲಿ 133 ವನ್ಯ ಜೀವಿಗಳನ್ನು ರಕ್ಷಿಸಲಾಗಿದೆ. 94 ರಸ್ತೆಗಳು, 3 ಸೇತುವೆಗಳು, 26 ಮನೆಗಳು ಹಾಗೂ 6 ಅಣೆಕಟ್ಟುಗಳು ಸೇರಿದಂತೆ ಮೂಲಭೂತ ಸೌಲಭ್ಯಗಳಿಗೆ ಹಾನಿ ಉಂಟಾಗಿದೆ.

ಬ್ರಹ್ಮಪುತ್ರ ನದಿ ನಿಮಾತಿಘಾಟ್, ತೇಝ್ಪುರ, ಗುವಾಹಟಿ ಹಾಗೂ ದುಬ್ರಿಯಲ್ಲಿ ಈಗಲೂ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಬುರ್ಹಿ ದಿಹಿಂಗ್, ದಿಖೌ, ದಿಸಾಂಗ್, ಕೊಪಿಲಿ ಹಾಗೂ ಕುಶಿಯಾರದಂತಹ ಇತರ ನದಿಗಳು ಕೂಡ ವಿವಿಧ ಸ್ಥಳಗಳಲ್ಲಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News