ದೇಶದ ಕೆಲವೆಡೆ ಟೊಮೆಟೊ ಬೆಲೆ 200ಕ್ಕೆ ಏರಿಕೆ
ಸೂರತ್: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪೂರೈಕೆಗೆ ಅಡ್ಡಿ ಉಂಟಾಗಿ ದಿಲ್ಲಿ ಸೇರಿದಂತೆ ದೇಶದ ಕೆಲವು ಭಾಗಗಳಲ್ಲಿ ಪ್ರತಿ ಕೆ.ಜಿ. ಟೊಮೆಟೊದ ಚಿಲ್ಲರೆ ಬೆಲೆ 200 ರೂ.ಗೆ ತಲುಪಿದೆ. ಇತರ ತರಕಾರಿಗಳ ಬೆಲೆಗಳು ಕೂಡ ಗಗನಕ್ಕೇರಿವೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಭಾರೀ ಮಳೆಯಿಂದಾಗಿ ತರಕಾರಿ ಬೆಳೆಯುವ ಪ್ರದೇಶಗಳು ಜಲಾವೃತವಾಗಿವೆ. ಇದರಿಂದ ಟೊಮೆಟೊ ಬೆಳೆ ಹಾಗೂ ನೆಲದ ಅಡಿಯಲ್ಲಿ ಬೆಳೆಯುವ ಕೊಳೆಯುವ ಇತರ ತರಕಾರಿಗಳು, ಮುಖ್ಯವಾಗಿ ನೀರುಳ್ಳಿ ಹಾಗೂ ಶುಂಠಿಗೆ ಹಾನಿ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.
ಗ್ರಾಹಕ ವ್ಯವಹಾರಗಳ ಸಚಿವಾಲಯದ ದತ್ತಾಂಶದ ಪ್ರಕಾರ, ದೇಶದಲ್ಲಿ ಸೋಮವಾರ ಪ್ರತಿ ಕೆ.ಜಿ. ಟೊಮೆಟೊದ ಸರಾಸರಿ ಚಿಲ್ಲರೆ ಬೆಲೆ 104 ರೂ.ನಿಂದ 108 ರೂ. ವರೆಗೆ ಇತ್ತು. ಸ್ವಾಯಿ ಮಧೋಪುರದಲ್ಲಿ ಪ್ರತಿ ಕೆ.ಜಿ. ಟೊಮೆಟೊಗೆ ಗರಿಷ್ಠ ಬೆಲೆ 200 ರೂ. ಇತ್ತು. ರಾಜಸ್ಥಾನದ ಚುರುವಿನಲ್ಲಿ ಪ್ರತಿ ಕೆ.ಜಿ. ಟೊಮೆಟೊಗೆ ಕನಿಷ್ಠ ಬೆಲೆ 31 ರೂ. ಇತ್ತು
ಮೆಟ್ರೊ ನಗರಗಳಲ್ಲಿ ಪ್ರತಿ ಕೆ.ಜಿ. ಟೊಮ್ಯಾಟೊ ಬೆಲೆ ಗಮನಿಸಿದರೆ, ಕೊಲ್ಕತಾದಲ್ಲಿ ಪ್ರತಿ ಕೆ.ಜಿ.ಗೆ 149 ರೂ., ಮುಂಬೈಯಲ್ಲಿ ಪ್ರತಿ ಕೆ.ಜಿ.ಗೆ 135 ರೂ., ಚೆನ್ನೈಯಲ್ಲಿ ಪ್ರತಿ ಕೆ.ಜಿ.ಗೆ 123 ರೂ., ದಿಲ್ಲಿಯಲ್ಲಿ ಪ್ರತಿ ಕೆ.ಜಿ.ಗೆ 100 ರೂ. ಇತ್ತು ದತ್ತಾಂಶ ತೋರಿಸಿದೆ.
ಗುಣಮಟ್ಟ ಹಾಗೂ ಮಾರಾಟವಾಗುವ ಸ್ಥಳಕ್ಕೆ ಅನುಗುಣವಾಗಿ ಟೊಮೆಟೊ ಹಾಗೂ ಇತರ ತರಕಾರಿಗಳ ಚಿಲ್ಲರೆ ಬೆಲೆ ಹೆಚ್ಚು ಕಡಿಮೆ ಆಗಿದೆ.