ಡಿಎಂಕೆ ಸಂಸದನಿಗೆ ಸೇರಿದ ಸ್ಥಳಗಳಲ್ಲಿ ಆದಾಯ ತೆರಿಗೆ ದಾಳಿ

Update: 2023-10-05 14:05 GMT

ಎಸ್. ಜಗದ್ರಕ್ಷಕನ್ | Photo: @Jagathofficial / X 

ಚೆನ್ನೈ: ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಂಸದ ಎಸ್. ಜಗದ್ರಕ್ಷಕನ್ ಗೆ ಸೇರಿದ, ಚೆನ್ನೈಯಲ್ಲಿರುವ ಸುಮಾರು 40 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯು ಗುರುವಾರ ಶೋಧ ಕಾರ್ಯಾಚರಣೆ ನಡೆಸಿದೆ.

ಆದಾಯ ತೆರಿಗೆ ಇಲಾಖೆಯು ಶೋಧ ನಡೆಸಿದ ಸ್ಥಳಗಳಲ್ಲಿ ಚೆನ್ನೈಯ ಕ್ರೋಮ್ಪೇಟ್ ಪ್ರದೇಶದಲ್ಲಿರುವ ಬಾಲಾಜಿ ಮತ್ತು ರೇಲಾ ಆಸ್ಪತ್ರೆಗಳು ಸೇರಿವೆ. ಈ ಆಸ್ಪತ್ರೆಗಳು ಜಗದ್ರಕ್ಷಕನ್ ಗೆ ಸೇರಿವೆ ಎನ್ನಲಾಗಿದೆ.

ಮಾಜಿ ಕೇಂದ್ರ ಸಚಿವ ಹಾಗೂ ಉತ್ತರ ತಮಿಳುನಾಡಿನ ಅರಕ್ಕೋಣಮ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಸದನ ವಿರುದ್ಧ ತನಿಖೆ ನಡೆಯುತ್ತಿರುವುದು ಇದು ಮೊದಲ ಬಾರಿಯೇನಲ್ಲ.

ಕ್ರೋಮ್ ಪೇಟ್ ನಲ್ಲಿರುವ ಕ್ರೋಮ್ ಚರ್ಮದ ಕಾರ್ಖಾನೆಯ ಸೊತ್ತುಗಳನ್ನು ಕಬಳಿಸಿದ ಆರೋಪದಲ್ಲಿ ಅವರ ವಿರುದ್ಧ ಅನುಷ್ಠಾನ ನಿರ್ದೇಶನಾಲಯವು 2020ರ ಜೂನ್ ನಲ್ಲಿ ಮೊಕದ್ದಮೆಯೊಂದನ್ನು ದಾಖಲಿಸಿತ್ತು. ಆದರೆ, 2022 ಸೆಪ್ಟಂಬರ್ ನಲ್ಲಿ ಮದರಾಸು ಹೈಕೋರ್ಟಿನ ಏಕ ನ್ಯಾಯಾಧೀಶ ಪೀಠವೊಂದು ಪೊಲೀಸರು ದಾಖಲಿಸಿದ್ದ ಎಫ್ಐಆರ್ಗಳನ್ನು ರದ್ದುಪಡಿಸಿತ್ತು. ನವೆಂಬರ್ ನಲ್ಲಿ, ಇಬ್ಬರು ಸದಸ್ಯರು ಹೈಕೋರ್ಟ್ ಪೀಠವೂ ಅವರ ವಿರುದ್ಧದ ಈಡಿ ಮೊಕದ್ದಮೆಯನ್ನು ರದ್ದುಪಡಿಸಿತ್ತು.

ಆದಾಯ ತೆರಿಗೆ ದಾಳಿಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್, ಭಾರತೀಯ ಜನತಾ ಪಕ್ಷ (ಬಿಜೆಪಿ)ದ ದ್ವೇಷ ರಾಜಕೀಯಕ್ಕೆ ಮಿತಿಯೇ ಇಲ್ಲ ಎಂದು ಬಣ್ಣಿಸಿದ್ದಾರೆ.

‘‘ಅವರು ನಿನ್ನೆ ಆಪ್ ಸಂಸದ ಸಂಜಯ್ ಸಿಂಗ್ ರನ್ನು ಬಂಧಿಸಿದರು. ಇಂದು ಡಿಎಂಕೆ ಸಂಸದ ಜಗದ್ರಕ್ಷಕನ್ ಮನೆ ಮೇಲೆ ದಾಳಿ ಮಾಡಿದ್ದಾರೆ. ಬಿಜೆಪಿಯು ತನ್ನ ರಾಜಕೀಯ ಲಾಭಕ್ಕಾಗಿ ಸ್ವತಂತ್ರವಾಗಿರಬೇಕಾಗಿರುವ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ತನಿಖಾ ಸಂಸ್ಥೆಗಳನ್ನು ‘ಇಂಡಿಯಾ’ ಮೈತ್ರಿಕೂಟದ ನಾಯಕರ ವಿರುದ್ಧ ಛೂಬಿಡಲಾಗುತ್ತಿದೆ’’ ಎಂದು ಡಿಎಮ್ಕೆ ಮುಖ್ಯಸ್ಥರೂ ಆಗಿರುವ ಸ್ಟಾಲಿನ್ ಸಾಮಾಜಿಕ ಮಾಧ್ಯಮ ‘x’ನಲ್ಲಿ ಬರೆದಿದ್ದಾರೆ.

‘‘ಪ್ರತಿಪಕ್ಷ ನಾಯಕರ ಮೇಲೆ ನಡೆಯುತ್ತಿರುವ ಈ ದಾಳಿಯು ಪ್ರಜಾಪ್ರಭುತ್ವದ ಮೇಲೆ ನಡೆಸುತ್ತಿರುವ ದಾಳಿಯಾಗಿದೆ’’ ಎಂದು ಅವರು ಬಣ್ಣಿಸಿದ್ದಾರೆ.

ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಅನುಷ್ಠಾನ ನಿರ್ದೇಶನಾಲಯವು ಬುಧವಾರ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ರನ್ನು ಬಂಧಿಸಿದೆ.

‘‘ಪಾರದರ್ಶಕವಾಗಿ ಮತ್ತು ನ್ಯಾಯೋಚಿತವಾಗಿ ಕೆಲಸ ಮಾಡುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗಷ್ಟೇ ಅನುಷ್ಠಾನ ನಿರ್ದೇಶನಾಲಯಕ್ಕೆ ಬುದ್ಧಿ ಹೇಳಿದೆ. ಆದರೆ, ಬಿಜೆಪಿ ಅದನ್ನು ನಿರ್ಲಕ್ಷಿಸಿದೆ’’ ಎಂದು ಸ್ಟಾಲಿನ್ ಹೇಳಿದರು. ‘‘ಕಾನೂನಿನ ಆಡಳಿತ ಮತ್ತು ಪ್ರಜಾಪ್ರಭುತ್ವವನ್ನು ಕಡೆಗಣಿಸಲು ಅವರು ದೃಢನಿರ್ಧಾರ ಮಾಡಿರುವುದನ್ನು ಇದು ಸೂಚಿಸುತ್ತದೆ’’ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News