ವಾಯು ಮಾಲಿನ್ಯ ಹೆಚ್ಚಳ: ಐದು ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ದಿಲ್ಲಿ, ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಐದು ರಾಜ್ಯಗಳಿಗೆ ವಾಯು ಮಾಲಿನ್ಯದ ವಿರುದ್ಧ ಹೋರಾಡಲು ತೆಗೆದುಕೊಂಡಿರುವ ಕ್ರಮಗಳ ಕುರಿತು ವಿಸ್ತೃತ ವರದಿಯನ್ನು ಸಲ್ಲಿಸುವಂತೆ ಮಂಗಳವಾರ ಸುಪ್ರೀಂ ಕೋರ್ಟ್ ಸೂಚಿಸಿದೆ ಎಂದು indiatoday.in ವರದಿ ಮಾಡಿದೆ.
ನ್ಯಾ. ಸುಧಾಂಶು ಧುಲಿಯ ಮತ್ತು ಪಿ.ಕೆ.ಮಿಶ‍್ರಾ ಅವರನ್ನೊಳಗೊಂಡ ನ್ಯಾ. ಎಸ್.ಕೆ.ಕೌಲ್ ನೇತೃತ್ವದ ತ್ರಿಸದಸ್ಯ ಪೀಠವು ಇನ್ನೊಂದು ವಾರದೊಳಗಾಗಿ ಈ ಕುರಿತು ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಎಂದು ಈ ಐದು ರಾಜ್ಯಗಳಿಗೆ ಕಾಲಾವಕಾಶ ನೀಡಿತು. ಮುಂದಿನ ವಿಚಾರಣೆಯನ್ನು ನವೆಂಬರ್ 7ರಂದು ನಿಗದಿಗೊಳಿಸಲಾಗಿದೆ.
ವಾಯು ಮಾಲಿನ್ಯದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ನ್ಯಾಯಾಲಯವು, ವಾಯು ಮಾಲಿನ್ಯದ ಪರಿಣಾಮವು ಭವಿಷ್ಯದ ಪೀಳಿಗೆಯ ಮೇಲೆ ತೀವ್ರವಾಗಿರುತ್ತದೆ ಎಂದು ಎಚ್ಚರಿಸಿತು. ವಾಯು ಮಾಲಿನ್ಯವು ಮನೆಯಿಂದ ಹೊರಗೆ ಕಾಲಿಡುವುದನ್ನು ತೀವ್ರ ಕ್ಲಿಷ್ಟಕರವಾಗಿಸಿದ್ದು, ನಿರ್ದಿಷ್ಟವಾಗಿ ದಿಲ್ಲಿಯಲ್ಲಿ ಒಳ್ಳೆಯ ಸಮಯ ಎಂದು ಕರೆಸಿಕೊಳ್ಳುವ ಬೆಳಗ್ಗಿನ ಹೊತ್ತೇ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನ್ಯಾಯಪೀಠವು ಕಳವಳ ವ್ಯಕ್ತಪಡಿಸಿತು.
ವರ್ಷ ವರ್ಷವೂ ಮರುಕಳಿಸುವ ಈ ಸಂಗತಿಯ ಸ್ವರೂಪದತ್ತ ಬೊಟ್ಟು ಮಾಡಿದ ನ್ಯಾಯಾಲಯವು, ಬೆಳೆಗಳನ್ನು ದಹಿಸುವುದು ದಿಲ್ಲಿಯಲ್ಲಿನ ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣ ಎಂದು ಅಭಿಪ್ರಾಯಪಟ್ಟಿತು.
ವಿಚಾರಣೆಯ ಸಂದರ್ಭದಲ್ಲಿ ಈ ಮಾಲಿನ್ಯಕ್ಕೆ ಭಾರಿ ಗಾಳಿ ಇರುವುದು ಕಾರಣ ಎಂದು ಹೇಳಿದ ವಕೀಲರಿಗೆ, ಇದಕ್ಕೆ ಪರಿಹಾರವಾಗಿ ಬಲಿಷ್ಠ ಆಡಳಿತಾತ್ಮಕ ಗಾಳಿಯ ಅಗತ್ಯವಿದೆ ಎಂದು ನ್ಯಾಯಾಲಯವು ಪ್ರತಿಪಾದಿಸಿತು.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ವಾಯು ಗುಣಮಟ್ಟದ ಸೂಚ್ಯಂಕ ಹಾಗೂ ಬೆಂಕಿ ಅವಘಡದ ಸಂಖ್ಯೆಗಳನ್ನೊಳಗೊಂಡಂತೆ ಹಾಲಿ ವಾಸ್ತವ ಪರಿಸ್ಥಿತಿಯನ್ನು ವಿವರಿಸುವ ಕೋಷ್ಟಕ ವರದಿಯನ್ನು ಸಲ್ಲಿಸುವಂತೆ ಸೂಚಿಸುವ ಮೂಲಕ ಸುಪ್ರೀಂ ಕೋರ್ಟ್ ಇಂದಿನ ವಿಚಾರಣೆಯನ್ನು ಮುಕ್ತಾಯಗೊಳಿಸಿತು.
ಇದಕ್ಕೂ ಮುನ್ನ, ದಿಲ್ಲಿಯೊಳಗೆ ಮತ್ತು ಹೊರವಲಯದಲ್ಲಿ ವಾಯು ಮಾಲಿನ್ಯವನ್ನು ನಿಯಂತ್ರಿಸಲು ತೆಗೆದುಕೊಂಡಿರುವ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ವಾಯು ಗುಣಮಟ್ಟ ನಿರ್ವಹಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.