INDIA ಮೈತ್ರಿಕೂಟ ನಿಜಕ್ಕೂ ಸವಾಲಾಗಿದೆ: ಕೇಂದ್ರ ಸಚಿವ

Update: 2023-10-06 16:36 GMT

Photo : twitter/dpradhanbjp

ಹೊಸ ದಿಲ್ಲಿ: ವಿರೋಧ ಪಕ್ಷಗಳ INDIA ಮೈತ್ರಿಕೂಟವು ನಿಜವಾದ ಸವಾಲಾಗಿದೆ ಎಂದು ಶುಕ್ರವಾರ ಹೇಳಿರುವ ಕೇಂದ್ರ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಧರ್ಮೇಂದ್ರ ಪ್ರಧಾನ್, ನನಗೆ ನನ್ನ ತವರು ರಾಜ್ಯವಾದ ಒಡಿಶಾದಿಂದ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಪಕ್ಷಕ್ಕೆ ಮನವಿ ಮಾಡಿದ್ದೇನೆ ಎಂದೂ ತಿಳಿಸಿದ್ದಾರೆ.

PTI ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, “ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಮೂರನೆಯ ಬಾರಿ ಸೇವೆ ಸಲ್ಲಿಸುವುದನ್ನು ಖಾತ್ರಿಗೊಳಿಸುವುದು ಬಿಜೆಪಿಯ ಕಾರ್ಯಸೂಚಿಯಾಗಿದೆ” ಎಂದು ಹೇಳಿದ್ದಾರೆ. ಧರ್ಮೇಂದ್ರ ಪ್ರಧಾನ್ ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿದ್ದಾರೆ. 

 “ನಾನು INDIA ಮೈತ್ರಿಕೂಟವನ್ನು ನಿಜವಾದ ಸವಾಲೆಂದು ಭಾವಿಸುತ್ತೇನೆ. ಯಾಕೆಂದರೆ, ಬಿಜೆಪಿ ಮತ್ತು ಎನ್‍ಡಿಎ ಯಾವುದೇ ಚುನಾವಣೆಯನ್ನು ಔಪಚಾರಿಕವಾಗಿ ತೆಗೆದುಕೊಳ್ಳುವುದಿಲ್ಲ. ನೆಲಮಟ್ಟದ ಕಾರ್ಯಕರ್ತರಿಂದ ಹಿಡಿದು ಉನ್ನತ ನಾಯಕರವರೆಗೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಪ್ರಧಾನಿಯು ಮುಂದೆ ನಿಂತು ನಮ್ಮನ್ನು ಮುನ್ನಡೆಸುತ್ತಾರೆ” ಎಂದಿದ್ದಾರೆ. 

ಲೋಕಸಭಾ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ತಮ್ಮ ಬಯಕೆಯ ಕುರಿತು ಪ್ರತಿಕ್ರಿಯಿಸಿರುವ ಅವರು, “ನಾನು ನನ್ನ ಬಯಕೆಯ ಬಗ್ಗೆ ಈಗಾಗಲೇ ಪಕ್ಷಕ್ಕೆ ತಿಳಿಸಿದ್ದು, ನನಗೊಂದು ಅವಕಾಶ ನೀಡುವಂತೆ ಮನವಿ ಮಾಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯು ದೇಶಕ್ಕೆ ಸೇವೆ ಸಲ್ಲಿಸಲು ಮೂರನೆ ಅವಕಾಶ ಪಡೆಯುವುದನ್ನು ಖಾತ್ರಿಗೊಳಿಸುವುದು ಬಿಜೆಪಿಯ ಕಾರ್ಯಸೂಚಿಯಾಗಿದೆ” ಎಂದು ಹೇಳಿದ್ದಾರೆ.

“ದೇಶದ ತಾಯಂದಿರು ಹಾಗೂ ಸೋದರಿಯರಿಗೆ ರಾಜಕೀಯ ಹಕ್ಕು ನೀಡುವ ಮೂಲಕ ಪ್ರಧಾನಿ ಮೋದಿಯವರು ಉದಾಹರಣೆಯೊಂದನ್ನು ನಿರ್ಮಿಸಿದ್ದಾರೆ” ಎಂದು ಮಹಿಳಾ ಮೀಸಲಾತಿ ಮಸೂದೆ ಕುರಿತು ಧರ್ಮೇಂದ್ರ ಪ್ರಧಾನ್ ಪ್ರತಿಕ್ರಿಯಿಸಿದ್ದಾರೆ. 

 “ಮಹಿಳಾ ಮೀಸಲಾತಿ ಮಸೂದೆಯನ್ನು ಕಾಂಗ್ರೆಸ್ ಪಕ್ಷವು ವಿಳಂಬಗೊಳಿಸಿತು ಹಾಗೂ ತನ್ನ ಆಡಳಿತಾವಧಿಯಲ್ಲಿ ಅದನ್ನು ಜಾರಿಗೆ ತರಲು ಯಾವುದೇ ಬದ್ಧತೆ ತೋರಲಿಲ್ಲ. ಯಾರೂ ಅವರ ಕೈಯನ್ನು ಕಟ್ಟಿ ಹಾಕಿರಲಿಲ್ಲ. ಅವರಿಗೆ ಮಸೂದೆಗೆ ಅನುಮೋದನೆ ಪಡೆಯುವ ಅವಕಾಶವಿದ್ದರೂ, ಅವರದನ್ನು ಮಾಡಲಿಲ್ಲ” ಎಂದು ಅವರು ಆರೋಪಿಸಿದ್ದಾರೆ. 

ರಾಷ್ಟ್ರವ್ಯಾಪಿ ಜಾತಿ ಗಣತಿ ನಡೆಸಬೇಕು ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಆಗ್ರಹದ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನ್, “ಕಳೆದ 75 ವರ್ಷಗಳಲ್ಲಿ ಅವರು ಹಾಗೂ ಅವರ ಕುಟುಂಬದ ಪಕ್ಷವು ಇತರೆ ಹಿಂದುಳಿದ ವರ್ಗಗಳು ಹಾಗೂ ದುರ್ಬಲ ವರ್ಗಗಳಿಗೆ ಏನು  ಮಾಡಿದೆ ಎಂಬ ವಿವರಗಳನ್ನು ಅವರು  ಹಂಚಿಕೊಳ್ಳಲಿ” ಎಂದು ಕಿಡಿ ಕಾರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News