ಭಾರತ-ಚೀನಾ ಸಂಬಂಧದಲ್ಲಿ ಸುಧಾರಣೆಯಾಗಿದೆ : ಜೈಶಂಕರ್

Update: 2024-12-03 15:00 GMT

 ಎಸ್. ಜೈಶಂಕರ್ | PTI 

ಹೊಸದಿಲ್ಲಿ : ಭಾರತ- ಚೀನಾ ಸಂಬಂಧಗಳಲ್ಲಿ ಸುಧಾರಣೆಯಾಗಿದೆ. ಈ ನಿಟ್ಟಿನಲ್ಲಿ ಆ ದೇಶದೊಂದಿಗೆ ಮಾತುಕತೆ ನಡೆಸುವ ನಿರ್ಧಾರಕ್ಕೆ ಭಾರತ ಬದ್ಧವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮಂಗಳವಾರ ಲೋಕಸಭೆಯಲ್ಲಿ ಹೇಳಿದ್ದಾರೆ.

ಚೀನಾದೊಂದಿಗೆ ಇತ್ತೀಚೆಗೆ ನಡೆದಿರುವ ಸೇನಾ ಮತ್ತು ರಾಜತಾಂತ್ರಿಕ ಮಾತುಕತೆಗಳ ವೇಳೆ ಗಡಿ ವಿವಾದಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಅವರು ತಿಳಿಸಿದರು. ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಯುದ್ದಕ್ಕೂ ಇರುವ ಪ್ರದೇಶಗಳಲ್ಲಿ ಗಸ್ತು ತಿರುಗುವುದಕ್ಕೆ ಸಂಬಂಧಿಸಿ ಅಕ್ಟೋಬರ್‌ನಲ್ಲಿ ಭಾರತ ಮತ್ತು ಚೀನಾ ದೇಶಗಳ ನಡುವೆ ಒಪ್ಪಂದವೊಂದು ಏರ್ಪಟ್ಟಿರುವುದನ್ನು ಸ್ಮರಿಸಬಹುದಾಗಿದೆ.

2020ರ ಗಲ್ವಾನ್ ಸಂಘರ್ಷದ ಬಳಿಕ, ಭಾರತ ಮತ್ತು ಚೀನಾ ನಡುವಿನ ಸಂಬಂಧವು ಹದಗೆಟ್ಟಿತ್ತು ಎಂದು ವಿದೇಶಾಂಗ ಸಚಿವರು ಸದನಕ್ಕೆ ತಿಳಿಸಿದರು.

‘‘ಇದರ ಯಶಸ್ಸು ನಮ್ಮ ಸೇನಾ ಪಡೆಗಳಿಗೆ ಹೋಗುತ್ತದೆ. ಕೋವಿಡ್ ಮತ್ತು ಸಾಗಾಟ ಸವಾಲುಗಳ ನಡುವೆಯೂ ನಮ್ಮ ಸೈನಿಕರು ಕ್ಷಿಪ್ರವಾಗಿ ಚೀನಾ ಸೈನಿಕರನ್ನು ಎದುರಿಸಿದರು’’ ಎಂದು ಸಚಿವರು ಹೇಳಿದರು.

ರಾಜತಾಂತ್ರಿಕ ಮಾತುಕತೆಗಳನ್ನು ಒಳಗೊಂಡ ಇತ್ತೀಚಿನ ಬೆಳವಣಿಗೆಗಳು ಭಾರತ-ಚೀನಾ ಸಂಬಂಧವನ್ನು ಅಭಿವೃದ್ಧಿಯ ಪಥದಲ್ಲಿ ಇರಿಸಿವೆ ಎಂದು ಜೈಶಂಕರ್ ನುಡಿದರು. ಗಡಿ ವಿವಾದ ಪರಿಹಾರಕ್ಕೆ ನ್ಯಾಯೋಚಿತ ಹಾಗೂ ಪರಸ್ಪರ ಸ್ವೀಕಾರಾರ್ಹ ಚೌಕಟ್ಟೊಂದನ್ನು ನಿರ್ಮಿಸುವ ನಿಟ್ಟಿನಲ್ಲಿ ಚೀನಾದೊಂದಿಗೆ ಮಾತುಕತೆ ನಡೆಸಲು ಭಾರತ ಬದ್ಧವಾಗಿದೆ ಎಂದು ಅವರು ಹೇಳಿದರು.

‘‘ಮುಂದಿನ ದಿನಗಳಲ್ಲಿ, ಉದ್ವಿಗ್ನತೆ ಶಮನ ಮತ್ತು ಗಡಿ ಪ್ರದೇಶಗಳಲ್ಲಿನ ಚಟುವಟಿಕೆಗಳ ಪರಿಣಾಮಕಾರಿ ನಿರ್ವಹಣೆ ಬಗ್ಗೆ ನಾವು ಮಾತುಕತೆಗಳನ್ನು ನಡೆಸಲಿದ್ದೇವೆ. ಸೇನಾ ವಾಪಸಾತಿ ಹಂತದ ಮುಕ್ತಾಯದ ಬಳಿಕ, ದ್ವಿಪಕ್ಷೀಯ ಮಾತುಕತೆಗಳ ಇತರ ಅಂಶಗಳ ಬಗ್ಗೆ ಗಮನ ಹರಿಸಲು ನಮಗೆ ಸಾಧ್ಯವಾಗುತ್ತದೆ’’ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News