ಮುಂಬೈ ದಾಳಿಯ ಸೂತ್ರಧಾರ ಹಫೀಝ್ ಸಯೀದ್ ಹಸ್ತಾಂತರಕ್ಕೆ ಭಾರತ ಆಗ್ರಹ
ಹೊಸದಿಲ್ಲಿ: ಲಷ್ಕರ್-ಎ-ತೋಯ್ಬಾ ಮುಖ್ಯಸ್ಥ ಮತ್ತು ಮುಂಬೈ ದಾಳಿಯ ರೂವಾರಿ ಹಫೀಝ್ ಸಯೀದ್ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಭಾರತವು ಪಾಕಿಸ್ತಾನ ಸರ್ಕಾರಕ್ಕೆ ಅಧಿಕೃತವಾಗಿ ಮನವಿ ಮಾಡಿಕೊಂಡಿದೆ.
ಭಾರತವು ಪಾಕಿಸ್ತಾನದ ಜತೆ ಹಸ್ತಾಂತರ ಒಪ್ಪಂದವನ್ನು ಹೊಂದಿಲ್ಲ ಹಾಗೂ ಸಯೀದ್ ನನ್ನು ನ್ಯಾಯದ ಕಟಕಟೆಗೆ ತರುವಲ್ಲಿ ಪಾಕಿಸ್ತಾನ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ಈ ಹಿಂದೆ ಕೂಡಾ ಭಾರತ ಪಾಕಿಸ್ತಾನ ಜತೆ ಪತ್ರ ವ್ಯವಹಾರ ನಡೆಸಿ, ಮುಂಬೈ ಭಯೋತ್ಪಾದಕ ದಾಳಿಯ ಸಂಬಂಧ ಸಯೀದ್ ಮತ್ತು ಆತನ ಸಹಚರರ ವಿರುದ್ಧ ತನಿಖೆಗೆ ನೆರವಾಗುವಂತೆ ಕೋರಿಕೊಂಡಿತ್ತು.
ಆದರೆ ಪಾಕಿಸ್ತಾನ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಯೀದ್ ಹಸ್ತಾಂತರಕ್ಕೆ ಅಧಿಕೃತ ಮವಿಯನ್ನು ಸಲ್ಲಿಸುವ ಮೂಲಕ ಭಾರತ ಸರ್ಕಾರ, ಭಾರತೀಯ ಕೋರ್ಟ್ ನ ಆದೇಶಕ್ಕೆ ಬದ್ಧವಾಗುವಂತೆ ಒತ್ತಡ ತಂದಿದೆ. ಎಲ್ಇಟಿ ಮುಖ್ಯಸ್ಥನನ್ನು ಪಾಕಿಸ್ತಾನದಲ್ಲಿ ವಿಚಾರಣೆ ನಡೆಸಬೇಕು ಅಥವಾ ನ್ಯಾಯಾಲಯದ ಕಟಕಟೆಗೆ ಭಾರತಕ್ಕೆ ಒಪ್ಪಿಸಬೇಕು ಎಂದು ಭಾರತೀಯ ಕೋರ್ಟ್ ಈ ಹಿಂದೆ ಆದೇಶ ನೀಡಿತ್ತು.
ಮುಂಬೈ ದಾಳಿಯ ಬಳಿಕ 2008ರ ಡಿಸೆಂಬರ್ ನಲ್ಲಿ, ಸಯೀದ್ ನನ್ನು ಯುಎನ್ 1256/1989ರ ಅಲ್ ಖೈದಾ ನಿರ್ಬಂಧ ಸಮಿತಿ, ಅಲ್ ಖೈದಾ ಉಗ್ರ ಸಂಘಟನೆಯ ಸಹಚರ ಎಂದು ಪಟ್ಟಿ ಮಾಡಿ ಅಂತಾರಾಷ್ಟ್ರೀಯ ನಿರ್ಬಂಧವನ್ನು ಹೇರಿತ್ತು. ಸಯೀದ್ ಚಲನ ವಲನಗಳ ಬಗ್ಗೆ ಮಾಹಿತಿ ನೀಡಿದವರಿಗೆ 10 ದಶಲಕ್ಷ ಡಾಲರ್ ಬಹುಮಾನವನ್ನು ಅಮೆರಿಕ ಘೋಷಿಸಿತ್ತು.