ಸಿಖ್ ಪ್ರತ್ಯೇಕತಾವಾದಿಗಳ ವಿರುದ್ಧ ಕ್ರಮಕ್ಕೆ ಭಾರತ ಸೂಚಿಸಿತ್ತು: ಅಮೆರಿಕ ಮಾಧ್ಯಮ ವರದಿ ತಳ್ಳಿ ಹಾಕಿದ ವಿದೇಶ ವ್ಯವಹಾರಗಳ ಸಚಿವಾಲಯ

Update: 2023-12-11 15:50 GMT

ಅರಿಂದಮ್ ಬಾಗ್ಚಿ | Photo: ANI 

ಹೊಸದಿಲ್ಲಿ: ಹರ್ದೀಪ್ ಸಿಂಗ್ ನಿಜ್ಜರ್ ಸೇರಿದಂತೆ ಸಿಖ್ ಪ್ರತ್ಯೇಕತಾವಾದಿಗಳ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿ ಭಾರತ ಸರಕಾರವು ಎಪ್ರಿಲ್ ನಲ್ಲಿ ತನ್ನ ರಾಜತಾಂತ್ರಿಕ ಕಚೇರಿಗಳಿಗೆ ‘‘ರಹಸ್ಯ ಪತ್ರ’’ಗಳನ್ನು ಕಳುಹಿಸಿತ್ತು ಎಂಬ ಅಮೆರಿಕದ ಮಾಧ್ಯಮವೊಂದರ ವರದಿಯನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ರವಿವಾರ ನಿರಾಕರಿಸಿದೆ.

‘‘ಅಂಥ ಯಾವುದೇ ಪತ್ರವನ್ನು ಬರೆಯಲಾಗಿಲ್ಲ’’ ಎಂದು ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ‘‘ಇದು ಭಾರತದ ವಿರುದ್ಧದ ನಿರಂತರ ಅಪಪ್ರಚಾರದ ಭಾಗವಾಗಿದೆ. ಆ ವರದಿಯನ್ನು ಪ್ರಕಟಿಸಿರುವ ಮಾಧ್ಯಮವು ಪಾಕಿಸ್ತಾನಿ ಗುಪ್ತಚರ ಇಲಾಖೆಯು ಹರಡುವ ನಕಲಿ ವ್ಯಾಖ್ಯಾನಗಳನ್ನು ಪ್ರಸಾರಕ್ಕೆ ಪ್ರಸಿದ್ಧವಾಗಿದೆ. ಲೇಖಕರ ಸಂದೇಶಗಳು ಈ ನಂಟನ್ನು ಸಾಬೀತುಪಡಿಸುತ್ತವೆ’’ ಎಂದು ಅವರು ಹೇಳಿದರು.

‘‘ಇಂಥ ನಕಲಿ ಸುದ್ದಿಗಳನ್ನು ದೊಡ್ಡದು ಮಾಡುವವರು ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಾರೆ’’ ಎಂದು ಅವರು ಅಭಿಪ್ರಾಯಪಟ್ಟರು.

ಪಾಶ್ಚಿಮಾತ್ಯ ದೇಶಗಳಲ್ಲಿರುವ ಖಾಲಿಸ್ತಾನಿ ಬೆಂಬಲಿಗರ ಬೆದರಿಕೆಯನ್ನು ನಿಭಾಯಿಸುವಂತೆ ಸೂಚಿಸಿ ಭಾರತ ಸರಕಾರವು ತನ್ನ ಕೌನ್ಸುಲೇಟ್ ಕಚೇರಿಗಳಿಗೆ ಪತ್ರಗಳನ್ನು ಬರೆದಿದೆ ಎನ್ನಲಾಗಿದೆ ಎಂದು ಅಮೆರಿಕದ ಸಮಾಜ ಸೇವೆ ಉದ್ದೇಶದ ಡಿಜಿಟಲ್ ಸುದ್ದಿ ಸಂಸ್ಥೆ ‘ದ ಇಂಟರ್ಸೆಪ್ಟ್’ ರವಿವಾರ ವರದಿ ಮಾಡಿತ್ತು.

ನಿಜ್ಜರ್ ಸೇರಿದಂತೆ ಹಲವಾರು ಸಿಖ್ ಪ್ರತ್ಯೇಕತಾವಾದಿಗಳ ಹೆಸರುಗಳನ್ನು ಒಳಗೊಂಡ ಆ ಪತ್ರಕ್ಕೆ ವಿದೇಶ ಕಾರ್ಯದರ್ಶಿ ವಿನಯ ಕ್ವಾಟ್ರ ಸಹಿ ಹಾಕಿದ್ದರು ಎಂದು ‘ದ ಇಂಟರ್ಸೆಪ್ಟ್’ನ ವರದಿ ಆರೋಪಿಸಿದೆ.

ಖಾಲಿಸ್ತಾನ್ ಬೆಂಬಲಿಗ ನಿಜ್ಜರ್ ನನ್ನು ಕೆನಡದ ವ್ಯಾಂಕೋವರ್ನಲ್ಲಿ ಜೂನ್ 18ರಂದು ಮುಸುಕುಧಾರಿ ಬಂದೂಕುಧಾರಿಗಳು ಕೊಂದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News