30.1 ಕೋಟಿ ಕೋವಿಡ್‌ ಲಸಿಕೆ ರಫ್ತು ಮಾಡಿರುವ ಭಾರತ; ಶೇ 77 ರಷ್ಟು ವಾಣಿಜ್ಯ ರಫ್ತುಗಳಾಗಿದ್ದವು: ವರದಿ

Update: 2023-12-26 16:20 GMT

Photo: PTI 

ಹೊಸದಿಲ್ಲಿ: ಜನವರಿ 2021 ಹಾಗೂ ಜೂನ್‌ 2023ರ ನಡುವೆ ಭಾರತ 30.1 ಕೋಟಿ ಕೋವಿಡ್‌ ಲಸಿಕೆ ಡೋಸ್‌ಗಳನ್ನು ರಫ್ತು ಮಾಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ. ಇವುಗಳಲ್ಲಿ ಶೇ. 77 ವಾಣಿಜ್ಯ ರಫ್ತುಗಳಾಗಿದ್ದರೆ ಶೇ. 17.3 ಲಸಿಕೆಗಳನ್ನು ಕಡಿಮೆ ಆದಾಯದ ದೇಶಗಳಿಗೆ ಕೋವ್ಯಾಕ್ಸ್‌ ಅಡಿ ಒದಗಿಸಲಾಗಿತ್ತು ಎಂದು thehindubusinessline.com ವರದಿ ಮಾಡಿದೆ.

ಚೀನಾ ಮತ್ತು ರಶ್ಯ ನಂತರ ಭಾರತ ಪ್ರಸಕ್ತ ಕೋವಿಡ್‌ ಲಸಿಕೆಗಳ ಜಗತ್ತಿನ ಮೂರನೇ ಅತ್ಯಂತ ದೊಡ್ಡ ವಾಣಿಜ್ಯ ರಫ್ತುದಾರನಾಗಿದೆ. ಇಲ್ಲಿಯ ತನಕ ದೇಶವು 23.4 ಕೋಟಿ ಲಸಿಕೆಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ರಫ್ತು ಮಾಡಿದೆ. ಇವುಗಳಲ್ಲಿ ಶೇ 48ರಷ್ಟನ್ನು ನೆದರ್‌ಲ್ಯಾಂಡ್ಸ್‌ ಪಡೆದುಕೊಂಡಿದ್ದರೆ ಆಸ್ಟ್ರೇಲಿಯಾ ಮತ್ತು ಮ್ಯಾನ್ಮಾರ್‌ ನಂತರದ ಸ್ಥಾನಗಳಲ್ಲಿವೆ.

ಜಾಗತಿಕವಾಗಿ ಎಲ್ಲಾ ದೇಶಗಳಿಗೆ ಕೋವಿಡ್‌ ಲಸಿಕೆ ಒದಗಿಸುವ ಉದ್ದೇಶದ ಕೊವ್ಯಾಕ್ಸ್‌ ಯೋಜನೆಯಡಿ ಭಾರತ 5.2 ಕೋಟಿ ಲಸಿಕೆ ಡೋಸ್‌ಗಳನ್ನು ವಿತರಿಸಿದೆ. ಈ ಯೋಜನೆ ಡಿಸೆಂಬರ್‌ 31ರಂದು ಮುಕ್ತಾಯಗೊಳ್ಳಲಿದ್ದು ಈ ಯೋಜನೆಯ ಗರಿಷ್ಠ ಪ್ರಯೋಜನವನ್ನು ಬಾಂಗ್ಲಾದೇಶ, ನೈಜೀರಿಯಾ ಮತ್ತು ನೇಪಾಳ ಪಡೆದುಕೊಂಡಿವೆ.

ಉಚಿತವಾಗಿ ಒದಗಿಸಲಾದ 1.5 ಕೋಟಿ ಲಸಿಕೆ ಡೋಸ್‌ಗಳನ್ನು ಪ್ರಮುಖವಾಗಿ ಮ್ಯಾನ್ಮಾರ್‌, ಬಾಂಗ್ಲಾದೇಶ ಮತ್ತು ನೇಪಾಳ ಪಡೆದುಕೊಂಡಿದ್ದವು.

ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಜಾಗತಿಕವಗಿ 29.5 ಕೋಟಿ ಲಸಿಕೆಗಳನ್ನು ಒದಗಿಸಿದೆ. ಇವುಗಳಲ್ಲಿ 12.5 ಕೋಟಿ ಕೋವಿಶೀಲ್ಡ್‌ ಆಗಿದ್ದರೆ ಉಳಿದವು ಕೊವೋವ್ಯಾಕ್ಸ್‌ ಆಗಿದ್ದವು. ವಾಣಿಜ್ಯ ವಿಭಾಗದಲ್ಲಿ ಸಂಸ್ಥೆ 6.2 ಕೋವಿಶೀಲ್ಡ್‌ ಮತ್ತು 16.8 ಕೋವೋವ್ಯಾಕ್ಸ್‌ ಒದಗಿಸಿತ್ತು.

1.1 ಕೋಟಿ ಕೋವಿಶೀಲ್ಡ್‌ ಲಸಿಕೆಗಳನ್ನು ಉಚಿತವಾಗಿ ಒದಗಿಸಲಾಗಿದ್ದರೆ ಸರ್ಕಾರ 5.2 ಕೋಟಿ ಕೋವಿಶೀಲ್ಡ್‌ ಲಸಿಕೆಗಳನ್ನು ಕೊವ್ಯಾಕ್ಸ್‌ ಅಡಿ ಒದಗಿಸಿತ್ತು.

ದೇಶದ ಎರಡನೇ ದೊಡ್ಡ ಲಸಿಕೆ ತಯಾರಿಕಾ ಸಂಸ್ಥೆ ಭಾರತ್‌ ಬಯೋಟೆಕ್‌ 59 ಲಕ್ಷ ಕೊವ್ಯಾಕ್ಸಿನ್‌ ಡೋಸ್‌ಗಳನ್ನು ಪೂರೈಸಿದೆ. ಇವುಗಳಲ್ಲಿ 29.3 ಲಕ್ಷ ಡೋಸ್‌ಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ರಫ್ತು ಮಾಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News