ಭಾರತವು ಮಾಲಿನ್ಯವನ್ನು ಶೇ.19.3ರಷ್ಟು ತಗ್ಗಿಸಿದೆ, ಜೀವಿತಾವಧಿ ಏರಿಕೆ: ವಾಯು ಗುಣಮಟ್ಟ ವರದಿ

Update: 2024-08-28 15:04 GMT

   ಸಾಂದರ್ಭಿಕ ಚಿತ್ರ | PC : PTI 

ಹೊಸದಿಲ್ಲಿ: 2021ಕ್ಕೆ ಹೋಲಿಸಿದರೆ 2022ರಲ್ಲಿ ಭಾರತದಲ್ಲಿ ವಾಯುಮಾಲಿನ್ಯವು ಶೇ.19.3ರಷ್ಟು ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಇದು ಜಾಗತಿಕವಾಗಿ ಬಾಂಗ್ಲಾದೇಶದ ಬಳಿಕ ಎರಡನೇ ಅತಿದೊಡ್ಡ ವಾಯುಮಾಲಿನ್ಯ ಕುಸಿತವಾಗಿ ಗುರುತಿಸಿಕೊಂಡಿದೆ. ಈ ವಾಯುಮಾಲಿನ್ಯ ಇಳಿಕೆಯಿಂದಾಗಿ ಪ್ರತಿ ಭಾರತೀಯ ಪ್ರಜೆಯ ಜೀವಿತಾವಧಿಯು ಸರಾಸರಿ 51 ದಿನಗಳಷ್ಟು ಹೆಚ್ಚಾಗಿದೆ ಎಂದು ಇತ್ತೀಚಿನ ವರದಿಯೊಂದು ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಪ್ರತಿ ಘನ ಮೀಟರ್‌ಗೆ ಐದು ಮೈಕ್ರೋಗ್ರಾಮ್‌ಗಳ ವಾರ್ಷಿಕ ಪಿಎಂ2.5 ಸಾಂದ್ರತೆ ಮಾರ್ಗಸೂಚಿಯನ್ನು ಪಾಲಿಸಲು ಭಾರತವು ವಿಫಲಗೊಂಡರೆ ಭಾರತೀಯರು ಸರಾಸರಿ 3.6 ವರ್ಷಗಳ ಜೀವಿತಾವಧಿಯನ್ನು ಕಳೆದುಕೊಳ್ಳಬಹುದು ಎಂಬ ಎಚ್ಚರಿಕೆಯನ್ನೂ ಚಿಕಾಗೋ ವಿವಿಯ ಎನರ್ಜಿ ಪಾಲಿಸಿ ಇನ್‌ಸ್ಟಿಟ್ಯೂಟ್ (ಇಪಿಐಸಿ) ಪ್ರಕಟಿಸಿರುವ ‘ಏರ್ ಕ್ವಾಲಿಟಿ ಲೈಫ್ ಇಂಡೆಕ್ಸ್ 2024 ವರದಿಯು ನೀಡಿದೆ.

ಭಾರತ ಮತ್ತು ಇತರ ದಕ್ಷಿಣ ಏಶ್ಯಾ ದೇಶಗಳಾದ್ಯಂತ ವಾಯುವಿನಲ್ಲಿಯ ಮಾಲಿನ್ಯ ಕಣಗಳ ಮಟ್ಟ ಕಡಿಮೆಯಾಗಲು ಅನುಕೂಲಕರ ಹವಾಮಾನ ಪರಿಸ್ಥಿತಿಗಳು ಮತ್ತು ತಾಪಮಾನ ವಿಲೋಮ ಪ್ರಮುಖ ಕಾರಣಗಳಾಗಿವೆ ಎಂದು ಸಂಶೋಧಕರು ಬೆಟ್ಟು ಮಾಡಿದ್ದಾರೆ. ಹವಾಮಾನ ಶಾಸ್ತ್ರದಲ್ಲಿ ಒಂದು ವಿದ್ಯಮಾನವಾಗಿರುವ ತಾಪಮಾನ ವಿಲೋಮದಲ್ಲಿ ಬೆಚ್ಚಗಿನ ಗಾಳಿಯ ಪದರವು ನೆಲದ ಬಳಿಯ ತಂಪು ಗಾಳಿಯನ್ನು ಆವರಿಸಿಕೊಳ್ಳುತ್ತದೆ ಮತ್ತು ತನ್ಮೂಲಕ ಮಾಲಿನ್ಯಕಾರಕಗಳು ನೆಲದಲ್ಲಿ ಶೇಖರಣೆಯಾಗುತ್ತವೆ.

2022ರಲ್ಲಿ ಭಾರತದ ಪಿಎಂ2.5 ಸಾಂದ್ರತೆಗಳು ಪ್ರತಿ ಘನ ಮೀಟರ್‌ಗೆ ಒಂಭತ್ತು ಮೈಕ್ರೋಗ್ರಾಮ್‌ನಷ್ಟಿದ್ದು, ಇದು 2021ಕ್ಕೆ ಹೋಲಿಸಿದರೆ ಶೇ.19.3ರಷ್ಟು ಇಳಿಕೆಯನ್ನು ಸೂಚಿಸುತ್ತದೆ.

ಗಮನಾರ್ಹ ವಾಯುಮಾಲಿನ್ಯ ಇಳಿಕೆಗಳು ಪಶ್ಚಿಮ ಬಂಗಾಳದ ಪುರುಲಿಯಾ ಮತ್ತು ಬಂಕುರಾ ಜಿಲ್ಲೆಗಳಲ್ಲಿ ಸ್ಪಷ್ಟವಾಗಿ ಕಂಡು ಬಂದಿದ್ದು,ಧನಬಾದ,ಪುರ್ಬಿ,ಪಶ್ಚಿಮ ಸಿಂಗಭೂಮ,ಪಶ್ಚಿಮ ಮೇದಿನಿಪುರ ಮತ್ತು ಜಾರ್ಖಂಡ್‌ನ ಬೊಕಾರೋಗಳು ನಂತರದ ಸ್ಥಾನದಲ್ಲಿದ್ದವು. ಈ ಪ್ರತಿಯೊಂದೂ ಜಿಲ್ಲೆಯಲ್ಲಿ ಪಿಎಂ2.5 ಮಟ್ಟಗಳು ಪ್ರತಿ ಘನ ಮೀಟರ್‌ಗೆ 20 ಮೈಕ್ರೋಗ್ರಾಮ್‌ಗೂ ಹೆಚ್ಚಿನ ಇಳಿಕೆಯನ್ನು ದಾಖಲಿಸಿದ್ದವು.

ಭಾರತದ ಅತ್ಯಂತ ಕಲುಷಿತ ಪ್ರದೇಶವಾಗಿರುವ ಉತ್ತರದ ಬಯಲು 2021ಕ್ಕೆ ಹೋಲಿಸಿದರೆ 2022ರಲ್ಲಿ ಮಾಲಿನ್ಯ ಕಣಗಳ ಮಟ್ಟಗಳಲ್ಲಿ ಶೇ.17.2ರಷ್ಟು ಇಳಿಕೆಯನ್ನು ಕಂಡಿತ್ತು ಎಂದು ವರದಿಯು ಹೇಳಿದೆ.

ಈ ಸುಧಾರಣೆಗಳ ಹೊರತಾಗಿಯೂ ಪ್ರಸ್ತುತ ಮಾಲಿನ್ಯ ಮಟ್ಟಗಳು ಮುಂದುವರಿದರೆ ಉತ್ತರದ ಬಯಲು ಪ್ರದೇಶದ ನಿವಾಸಿಗಳು ಸರಾಸರಿ 5.4 ವರ್ಷಗಳ ಜೀವಿತಾವಧಿಯನ್ನು ಕಳೆದುಕೊಳ್ಳಬಹುದು. ಆದರೆ ಮುಂಬರುವ ವರ್ಷಗಳಲ್ಲಿ ಮಾಲಿನ್ಯ ಕಣಗಳ ಇಳಿಕೆಯು ಇದೇ ದರದಲ್ಲಿ ಮುಂದುವರಿದರೆ ಈ ಪ್ರದೇಶದಲ್ಲಿ ಜೀವಿತಾವಧಿ 1.2 ವರ್ಷಗಳಷ್ಟು ಹೆಚ್ಚಾಗಬಹುದು ಎಂದು ವರದಿಯು ತಿಳಿಸಿದೆ.

ಭಾರತದ ಮುಂಚೂಣಿಯ ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮ (ಎನ್‌ಸಿಎಪಿ)ದಲ್ಲಿ ಭಾಗವಹಿಸಿರುವ ಜಿಲ್ಲೆಗಳು ಪಿಎಂ 2.5 ಮಟ್ಟಗಳಲ್ಲಿ ಸರಾಸರಿ ಶೇ.19ರಷ್ಟು ಇಳಿಕೆಯನ್ನು ಕಂಡಿವೆ ಮತ್ತು ಈ ಕಾರ್ಯಕ್ರಮದಿಂದ ಹೊರಗಿರುವ ಜಿಲ್ಲೆಗಳಲ್ಲಿ ಶೇ.16ರಷ್ಟು ಮಾಲಿನ್ಯ ಇಳಿಕೆ ದಾಖಲಾಗಿದೆ ಎಂದೂ ವರದಿಯು ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News