ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ: ಅಮೆರಿಕ, ಚೀನಾವನ್ನು ಹಿಂದಿಕ್ಕಿದ ಭಾರತ
ಹೊಸದಿಲ್ಲಿ: ವಿಶ್ವದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಹತ್ತು ಪ್ರಮುಖ ಆರ್ಥಿಕತೆಗಳ ಪೈಕಿ ಭಾರತ, ಪ್ರಬಲ ರಾಷ್ಟ್ರಗಳಾದ ಅಮೆರಿಕ ಮತ್ತು ಚೀನಾವನ್ನು ಹಿಂದಿಕ್ಕಿದೆ. ಐಎಂಎಫ್ 2024ನೇ ವರ್ಷಕ್ಕಾಗಿ ಅಂದಾಜಿಸಿರುವ ಜಿಡಿಪಿ ಪ್ರಗತಿದರದ ಆಧಾರದಲ್ಲಿ ವಿಶ್ವದ 25 ಪ್ರಮುಖ ಆರ್ಥಿಕತೆಗಳನ್ನು ಪರಿಗಣಿಸಿ ಈ ಪಟ್ಟಿ ಸಿದ್ಧಪಡಿಸಲಾಗಿದೆ.
ಭಾರತ 2024-25ನೇ ಹಣಕಾಸು ವರ್ಷದಲ್ಲಿ ವಿಶ್ವದಲ್ಲೇ ಅತ್ಯಧಿಕ ಬೆಳವಣಿಗೆ ದರವನ್ನು ಹೊಂದಿದ ದೇಶ ಎಂದು ಐಎಂಎಫ್ ನ ವಿಶ್ವ ಆರ್ಥಿಕ ದೃಷ್ಟಿಕೋನ- ಜುಲೈ 2024 ಪಟ್ಟಿ ಮಾಡಿದೆ. ಭಾರತದ ಆರ್ಥಿಕ ಪ್ರಗತಿ 2024ರಲ್ಲಿ ಶೇಕಡ 7ರಷ್ಟು ಮತ್ತು 2025ರಲ್ಲಿ ಶೇಕಡ 6.5ರಷ್ಟು ಎಂದು ಅಂದಾಜಿಸಲಾಗಿದೆ. ಜಿಡಿಪಿಯಲ್ಲಿ ಭಾರತ ಇದೀಗ ವಿಶ್ವದಲ್ಲೇ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ ಹಾಗೂ ಮುಂದಿನ ವರ್ಷಗಳಲ್ಲಿ ಇದು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಚೀನಾ 2024 ಮತ್ತು 2025ರಲ್ಲಿ ಕ್ರಮವಾಗಿ ಶೇಕಡ 5 ಹಾಗೂ 4.5ರ ದರದಲ್ಲಿ ಅಭಿವೃದ್ಧಿ ಸಾಧಿಸುವ ಸಾಧ್ಯತೆ ಇದ್ದು, ಇದು ಎರಡನೇ ಸ್ಥಾನದಲ್ಲಿದೆ. ಶೇಕಡ 5ರ ಪ್ರಗತಿ ನಿರೀಕ್ಷೆಯಲ್ಲಿರುವ ಇಂಡೋನೇಷ್ಯಾ ಮೂರನೇ ಸ್ಥಾನದಲ್ಲಿದ್ದು, ಇದು ವಿಶ್ವದ ಅತಿದೊಡ್ಡ ಆರ್ಥಿಕತೆಗಳ ಪೈಕಿ 16ನೇ ಸ್ಥಾನದಲ್ಲಿದೆ. ಶೇಕಡ 3.6ರಷ್ಟು ಜಿಡಿಪಿ ಅಭಿವೃದ್ಧಿ ಸಾಧಿಸಲಿರುವ ಟರ್ಕಿ ಐದನೇ ಸ್ಥಾನದಲ್ಲಿದ್ದು, ರಷ್ಯಾ (3.2%), ಪೋಲಂಡ್ (3.1%), ಅಮೆರಿಕ (2.6%) ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.
ಅಮೆರಿಕದ ಪ್ರಗತಿ ಮುಂದಿನ ವರ್ಷ ಶೇಕಡ 1.9ಕ್ಕೆ ಇಳಿಯುವ ನಿರೀಕ್ಷೆ ಇದೆ. ದಕ್ಷಿಣ ಕೊರಿಯಾ, ಸ್ಪೇನ್ ಹಾಗೂ ಮೆಕ್ಸಿಕೊ ಅಗ್ರ 10ರ ಪೈಕಿ ಸ್ಥಾನ ಪಡೆದಿವೆ.